
ಯಡಿಯೂರಪ್ಪ ಶಿಷ್ಯ ಡಾ.ವಿಶ್ವನಾಥ ಪಾಟೀಲ ಅವರಿಗೆ ಒಲಿದ ಕಾಡಾ ಅಧ್ಯಕ್ಷತೆ
ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಿಷ್ಯ ಹಾಗೂ ಬೈಲಹೊಂಗಲದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರಿಗೆ ಘಟಪ್ರಭಾ-ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಅಧ್ಯಕ್ಷತೆ ಒಲಿದು ಬಂದಿದೆ. ಇಂದು ಮುಂಜಾನೆ ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಇರುವ ಕಾಡಾ ಕಚೇರಿಯಲ್ಲಿ ಡಾ.ವಿಶ್ವನಾಥ ಪಾಟೀಲ ಅಧಿಕಾರ ವಹಿಸಿಕೊಂಡರು.
ನಾಲ್ಕೈದು ದಿನಗಳ ಹಿಂದಷ್ಟೇ ಡಾ. ವಿಶ್ವನಾಥ ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ಎಣ್ಣೆ ಬೆಳೆ, ಬೀಜ ಬೆಳೆಗಾರರ ಮಹಾಮಂಡಳಿ, ಹುಬ್ಬಳ್ಳಿಯ ಅಧ್ಯಕ್ಷತೆ ವಹಿಸಲಾಗಿತ್ತು. ಈಗ ಆ ಹುದ್ದೆಯನ್ನು ಹಿಂದಕ್ಕೆ ಪಡೆದು ಕಾಡಾ ಅಧ್ಯಕ್ಷತೆ ವಹಿಸಲಾಗಿದೆ. ಈ ಮೂಲಕ ಯಡಿಯೂರಪ್ಪನವರು ತಮ್ಮ ಶಿಷ್ಯನಿಗೆ ತವರು ಜಿಲ್ಲೆ ಬೆಳಗಾವಿಯಲ್ಲಿಯೇ ಒಳ್ಳೆಯ ಗಿಫ್ಟ್ ನೀಡಿದ್ದಾರೆ. ಬೆಳಗಾವಿ ಸೇರಿದಂತೆ ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯನ್ನು ಕಾಡಾ ಹೊಂದಿದೆ.

ಹಿಂದೆ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದಾಗ, ಅವರ ಜೊತೆಯಾಗಿದ್ದ ಡಾ.ಪಾಟೀಲ ಅವರು ಬೈಲಹೊಂಗಲದಿಂದ ಸ್ಪರ್ಧಿಸಿ ಕೆಜೆಪಿಯಿಂದ ಗೆದ್ದು ಶಾಸಕರಾಗಿದ್ದರು. ನಂತರದ ಚುನಾವಣೆಯಲ್ಲಿ ಅವರು ಸೋತರೂ, ಯಡಿಯೂರಪ್ಪನವರು ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ (ಗ್ರಾಮೀಣ) ಸ್ಥಾನಮಾನ ನೀಡಿದ್ದರು. ಈಗ ಮತ್ತೊಮ್ಮೆ ಡಾ.ವಿಶ್ವನಾಥ ಅವರಿಗೆ ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಒಳ್ಳೆಯ ಹುದ್ದೆ ಒಲಿದು ಬಂದಿದೆ.