ವೀರಶೈವ ಸಮುದಾಯ ಸಂಘಟನೆ ಬಲಪಡಿಸಲು ಬೃಹತ್ ಪ್ರಮಾಣದಲ್ಲಿ ಶ್ರೀ ವೀರಭದ್ರ ಜಯಂತಿ ಆಚರಣೆಗೆ ಈ ವರ್ಷದಿಂದ ಚಾಲನೆ, ಯಡಿಯೂರಪ್ಪನವರಿಗೆ ಮೊದಲ ವರ್ಷದ ಪ್ರಶಸ್ತಿ

ವೀರಶೈವ ಸಮುದಾಯ ಸಂಘಟನೆ ಬಲಪಡಿಸಲು ಬೃಹತ್ ಪ್ರಮಾಣದಲ್ಲಿ ಶ್ರೀ ವೀರಭದ್ರ ಜಯಂತಿ ಆಚರಣೆಗೆ ಈ ವರ್ಷದಿಂದ ಚಾಲನೆ, ಯಡಿಯೂರಪ್ಪನವರಿಗೆ ಮೊದಲ ವರ್ಷದ ಪ್ರಶಸ್ತಿ

 

 

ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭೆಯು ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮುದಾಯವನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ಪ್ರಕಟಿಸಿರುವ ಬೆನ್ನಲ್ಲೇ, ವೀರಶೈವ ಲಿಂಗಾಯತ ಸಂಘಟನೆಯೂ ಸಂಘಟನೆಯನ್ನು ಶಕ್ತಿಯುತಗೊಳಿಸಲು ವಿಶೇಷ ಮತ್ತು ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಬಹುತೇಕ ವೀರಶೈವರು ಮತ್ತು ಲಿಂಗಾಯತರ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವರಾಗಿದ್ದು, ವೀರಭದ್ರ ಜಯಂತಿಯನ್ನು ಗ್ರಾಮ ಮಟ್ಟದಿಂದ ಹಿಡಿದು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಮುಂದಾಗಿದೆ.

 

ಬೆಳಗಾವಿಯ ಪೊಲೀಸ್ ಕ್ವಾಟರ್ಸ್ ನಲ್ಲಿ ಹಳೆಯ ಶ್ರೀ ವೀರಭದ್ರ ದೇವಸ್ಥಾನವಿದ್ದು, ಇತ್ತೀಚಿಗೆ ರಾಮತೀರ್ಥ ನಗರದಲ್ಲಿ ಮತ್ತೊಂದು ವೀರಭದ್ರ ದೇವಸ್ಥಾನ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿಯ ಗೊಡಚಿ ವೀರಭದ್ರೇಶ್ವರ ಮತ್ತು ಯಡೂರು ವೀರಭದ್ರೇಶ್ವರ ದೇವಸ್ಥಾನಗಳು ಪ್ರಸಿದ್ಧವಾಗಿದ್ದು, ಇಲ್ಲಿ ವಾರಗಟ್ಟಲೆ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವೀರಭದ್ರೇಶ್ವರ ದೇವಸ್ಥಾನಗಳಿವೆ. ಹೊರದೇಶದಲ್ಲಿಯೂ ಇವೆ. ಹೀಗಾಗಿ ವೀರಭದ್ರೇಶ್ವರ ಜಯಂತಿ ಆಚರಣೆ ಅಡಿಯಲ್ಲಿ ಸಂಘಟನೆಯನ್ನು ಬಲಪಡಿಸಲು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುವುದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

 

ಶ್ರೀ ವೀರಭದ್ರೇಶ್ವರ ಸಮುದಾಯದ ಮೂಲ ಪುರುಷ. ಆತನ ಜಯಂತಿಯನ್ನು ಭಾದ್ರಪದ ಮಾಸದ ಮೊದಲ ಮಂಗಳವಾರ ಮಾಡಬೇಕೆಂದು ಇತಿಹಾಸ ಇದೆ. ಆದರೆ ಅದನ್ನು ಆಚರಿಸಲಾಗುತ್ತಿಲ್ಲ. “ಈ ನಿಟ್ಟಿನಲ್ಲಿ ನಾವು ಕಳೆದ ನಾಲ್ಕೈದು ವರ್ಷಗಳಿಂದ ಚಿಂತನೆ ನಡೆಸುತ್ತಿದ್ದೆವು. ಆಗ ಈ ಕಾರ್ಯಕ್ಕೆ ಮುಂದೆ ಬಂದಿದ್ದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ. ಅದರಂತೆ ಬೆಂಗಳೂರು ಮಹಾನಗರದಲ್ಲಿ ಸಪ್ಟೆಂಬರ್ ೧೪ ರಂದು ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ನೇತೃತ್ವದಲ್ಲಿ, ರಂಭಾಪುರ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿಗೆ ಚಾಲನೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಯಂತಿಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

 

ಅದರಂತೆ ಹುಕ್ಕೇರಿ ಮಠದ ವತಿಯಿಂದ ವೀರಭದ್ರೇಶ್ವರ ಪ್ರಶಸ್ತಿ ನೀಡುವ ಬಗ್ಗೆ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಹೀಗಾಗಿ ಮೊದಲ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನೀಡಲಾಗುತ್ತಿದೆ. ಯಡಿಯೂರಪ್ಪನವರ ಮನೆದೇವರು ಕೂಡ ವೀರಭದ್ರೇಶ್ವರ ಆಗಿದ್ದು, ಅಲ್ಲದೆ ಮಠಮಾನ್ಯಗಳ ವಿಚಾರ ಬಂದಾಗ ಅವರು ಮುಂಚೂಣಿಯಲ್ಲಿ ಇರುವುದರಿಂದ ಅವರಿಗೆ ಮೊದಲ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು  ಸ್ವಾಮೀಜಿ ಮಾಹಿತಿ ನೀಡಿದರು.

 

ಮಾಜಿ ಶಾಸಕ ಹಾಗೂ ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾತನಾಡಿ, ಈಗಾಗಲೇ ಎಲ್ಲ ತಾಲೂಕು ಮತ್ತು ಜಿಲ್ಲೆಗಳಲ್ಲಿನ ಸಮುದಾಯದ ಮುಖಂಡರಿಗೆ ವೀರಭದ್ರ ಜಯಂತಿಯನ್ನು ಆಚರಿಸುವಂತೆ ಸಂದೇಶ ನೀಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳು ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.