ನಿಗದಿಯಾಗದ ಕಬ್ಬಿನ ಎಸ್.ಎ.ಪಿ ದರ; ಕೂಡಲೇ ಸಭೆ ಕರೆಯಲು ಜಿಲ್ಲಾಧಿಕಾರಿಗೆ ಸಿದಗೌಡ ಮೋದಗಿ ಒತ್ತಾಯ

ಬೆಳಗಾವಿ: ಜಿಲ್ಲೆಯಲ್ಲಿನ 26 ಸಕ್ಕರೆ ಕಾರ್ಖಾನೆಗಳು ಕಳೆದ ವಾರದಿಂದ ಬಾಯ್ಕರ್ ಪ್ರದೀಪನ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಕಬ್ಬು ನುರಿಸುವ ಹಂಗಾಮು ಆರಂಭಿಸಲು ಸ್ವಾಗತಿಸಲು ಆತುರದಿಂದ ಕಾಯುತ್ತಿವೆ. ಆದರೆ ರಾಜ್ಯ ಸರ್ಕಾರದಿಂದ ಇದುವರೆಗೆ ಎಸ್.ಎ.ಪಿ ದರ ನಿಗದಿಯಾಗಿರುವುದಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಕೂಡಲೇ ಸಭೆಯನ್ನು ಆಯೋಜಿಸಬೇಕು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ ಆಗುವ ವರೆಗೆ ರೈತರು ಕಾರ್ಖಾನೆಗಳಿಗೆ ತಮ್ಮ ಕಬ್ಬನ್ನು ಸಾಗಿಸಲು ಆತುರ ಪಡಬಾರದು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಪ್ರಸಕ್ತ ಹಂಗಾಮಿನ ಎಫ್.ಆರ್.ಪಿ ದರವನ್ನು 2,875 ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರದಿಂದ ಎಸ್.ಎ.ಪಿ ದರ ಇದುವರೆಗೆ ನಿಗದಿಯಾಗಿಲ್ಲ. ಜೊತೆಗೆ ಹಲವಾರು ಕಾರ್ಖಾನೆಗಳು ಕಳೆದ ಸಾಲಿನ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಧಿಕಾರಿಗಳು ಕೂಡಲೇ ಸಭೆ ಕರೆಯಬೇಕೆಂದು ಸಿದಗೌಡ ಮೋದಗಿ ಅವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು 2 ಲಕ್ಷ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.  ಕೋವಿಡ್ ಕಾರಣದಿಂದ ಕೃಷಿ ವಲಯವೂ ಸಾಕಷ್ಟು ತೊಂದರೆಗೆ ಒಳಪಟ್ಟಿದ್ದು, ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಸಭೆ ಕರೆಯಬೇಕು. ವಿಳಂಬ ಮಾಡಿದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಮೋದಗಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page