ಇಂದು ಅಂಬೇಡ್ಕರ್ ಅವರಿಗೆ ‘ಪಂಡಿತ’ ಬಿರುದು ನೀಡಿದ್ದ ಶಾಹು ಮಹಾರಾಜರ ಪುಣ್ಯತಿಥಿ

ಬೆಳಗಾವಿ: ಕ್ರಾಂತಿಕಾರಿ ರಾಜರಲ್ಲಿ ಒಬ್ಬರಾದ ಛತ್ರಪತಿ ಶಾಹು ಮಹಾರಾಜರು ಭಾರತದ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಅಜರಾಮರ. ಜಾತಿ ಆಧಾರಿತ ಮೇಲು-ಕೀಳುಗಳನ್ನು ಹೊಂದಿದ್ದ ಭಾರತೀಯ ಸಮಾಜದಲ್ಲಿ ಮೀಸಲಾತಿ ಮೂಲಕ ಸಮಾನತೆ ತರಬೇಕು ಎನ್ನುವ ಕಲ್ಪನೆಯನ್ನು ಮೊದಲು ಭಿತ್ತಿದವರೇ ಶಾಹು ಮಹಾರಾಜರು. ಇಂದು ಅವರ ಪುಣ್ಯತಿಥಿ.

ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಶಾಹು ಮಹಾರಾಜರಿಗೆ ದೂರದೃಷ್ಟಿ ಎಷ್ಟಿತ್ತು ಅಂದರೆ, ದೇಶಕ್ಕೆ ಬ್ರಾಹ್ಮಣೇತರ ಮಾಧ್ಯಮ ಬೇಕು ಎಂದು ಅಂದೇ ಅವರು ಪ್ರತಿಪಾದಿಸಿದ್ದರು. ಅಲ್ಲದೆ, ಮಾಧ್ಯಮ ಕ್ಷೇತ್ರದಲ್ಲಿಯೂ ಮೀಸಲಾಗಿ ತರಬೇಕೆಂದು ಹೇಳಿದ್ದರು. ಇನ್ನೊಂದು ಕಡೆ ಸೆಕ್ಯುಲರ್ ಬ್ರಾಹ್ಮಣ ಪತ್ರಕರ್ತರನ್ನು ಸನ್ಮಾನಿಸಿ ಅವರಿಗೆ ಧನಸಹಾಯವನ್ನು ಕೂಡ ಮಾಡಿದ್ದರು. ದಕ್ಷಿಣ ಭಾರತದ ಮಟ್ಟಿಗೆ ಶಾಹು ಮಹಾರಾಜರನ್ನು ಬ್ರಾಹ್ಮಣೇತರ ಚಳುವಳಿಗಳ ಪಿತಾಮಹ ಅನ್ನುತ್ತಾರೆ.

ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಭಾರತ ದೇಶದ ಪ್ರಜಾಪ್ರಭುತ್ವದ ಅಡಿಪಾಯ ಆಗುತ್ತಾರೆ ಎಂದು ಶಾಹು ಮಹಾರಾಜರು 1921 ರಲ್ಲಿಯೇ ಹೇಳಿದ್ದರು. ಡಾ.ಅಂಬೇಡ್ಕರ ಅವರಿಗೆ ‘ಪಂಡಿತ’ ಎನ್ನುವ ಬಿರುದನ್ನೂ ನೀಡಿದ್ದರು. ಶಾಹು ಮಹಾರಾಜರ ಪ್ರೇರಣೆಯಿಂದಲೇ ಹುಬ್ಬಳ್ಳಿಯಲ್ಲಿ 1915 ಲಿಂಗಾಯತರ ಅಧಿವೇಶನ ನಡೆದಿತ್ತು. ಅಧಿವೇಶನಕ್ಕೆ ಶಾಹು ಮಹಾರಾಜರು ಹಣಕಾಸಿನ ನೆರವು ನೀಡಿದ್ದರು.

ಆದರೆ ಶಾಹು ಅವರ ಕೊನೆಯ ದಿನಗಳು ಕಷ್ಟದಾಯಕವಾಗಿದ್ದವು. ಶಾಹು ಅವರು ಸಂಧ್ಯಾಕಾಲದಲ್ಲಿ ಇದ್ದಾಗ ಅವರ ಪುತ್ರ ರಾಜಕುಮಾರ ಶಿವಾಜಿ ಬೇಟೆಯಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಪುತ್ರನ ಸಾವಿನ 12 ದಿನಗಳ ಅಂತರದಲ್ಲಿಯೇ ಅವರು ಸೊಸೆಯನ್ನು ಕಳೆದುಕೊಳ್ಳುತ್ತಾರೆ. ಈ ಎರಡೂ ಸಾವುಗಳು ಮಾನಸಿಕವಾಗಿ ಅವರನ್ನು ಜರ್ಝರಿತಗೊಳಿಸಿದ್ದವು.

ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಕಟಿಸಲಾಗಿರುವ ಶಾಹು ಮಹಾರಾಜರ ಸಂಪುಟಗಳಲ್ಲಿ ದಾಖಲಾಗಿರುವಂತೆ ಛತ್ರಪತಿ ಶಿವಾಜಿ ಮನೆತನದ ಕುಡಿಯಾದ ಶಾಹು ಮಹಾರಾಜರನ್ನು ಕೊಲ್ಲಲು ‘ಶಿವಾಜಿ ಕ್ಲಬ್’ ಎನ್ನುವ ಸಂಘಟನೆ 1894 ರಲ್ಲಿ ಕೊಲ್ಲಾಪುರದಲ್ಲಿ ಹುಟ್ಟಿಕೊಂಡಿತ್ತು. ಶಾಹು ಮಹಾರಾಜರು ಬ್ರಿಟಿಷರಿಗೆ ಬರೆದ ಪತ್ರಗಳ ಪ್ರಕಾರ ಅವರು ದ್ವೇಷಿಸಿಕೊಂಡು ಬಂದಿದ್ದ ಬ್ರಾಹ್ಮಣ ಸಮುದಾಯದ ಮುಖಂಡರೇ ಈ ಸಂಘಟನೆಯ ನಾಯಕರಾಗಿದ್ದರು. ಆದರೆ ಅವರು ತಮ್ಮ ಸಂಘಟನೆಗೆ ಶಿವಾಜಿಯ ಹೆಸರನ್ನು ಏಕೆ ಇಟ್ಟಿದ್ದರು ಎನ್ನುವುದನ್ನು ತಿಳಿಯಲು ಮರಾಠರಿಗೆ ಬಹಳ ಕಾಲ ಬೇಕಾಯಿತು.

ಬ್ರಾಹ್ಮಣ ಸಮಾಜ ಶಾಹು ಮಹಾರಾಜರನ್ನು ದ್ವೇಷಿಸಲು ಕಾರಣ ಎಂದರೆ, ‘ವೇದೋಕ್ತ ಮತ್ತು ಪುರಾಣೋಕ್ತ’ ವಿವಾದದ ಬಳಿಕ ಮಹಾರಾಜರು ತಮ್ಮ ಆಡಳಿತದಿಂದ ಬ್ರಾಹ್ಮಣರ ಅಸ್ತಿತ್ವವನ್ನು ಹಂತಹಂತವಾಗಿ ಕಡಿಮೆ ಮಾಡುತ್ತ ಬಂದಿದ್ದರು.  ಕೊಲ್ಹಾಪುರದಲ್ಲಿ 1908 ಮಾರ್ಚ್ 3 ರಂದು ಶಾಹು ಮಹಾರಾಜರ ಮಗಳಾದ ಅಕ್ಕಾಸಾಹೇಬರ ಮದುವೆಗೆ ಬಾಂಬೆ ಗವರ್ನರ್ ಕ್ಲಾರ್ಕ್, ಕೊಲ್ಹಾಪುರದ ರಾಜಕೀಯ ಎಜೆಂಟ್ ಫೆರಿಸ್, ಮುದೋಳದ ಮಹಾರಾಜರು ಮತ್ತು ಇತರ ಬ್ರಿಟಿಷ ಅಧಿಕಾರಿಗಳು ಬರುವವರಿದ್ದರು. ಈ ಮದುವೆಯ ಕಾರ್ಯಕ್ರಮದಲ್ಲಿ ಬಾಂಬು ಹಾಕಿ ಮಹಾರಾಜರನ್ನಷ್ಟೇ ಅಲ್ಲ ಅವರ ಬೆಂಬಲಕ್ಕೆ ನಿಂತವರನ್ನೆಲ್ಲಾ ಕೊಲ್ಲುವ ಯೋಜನೆ ಸಿದ್ಧವಾಗಿತ್ತು. ಆದರೆ ಬಾಂಬು ಪುಣೆಯಿಂದ ಕೊಲ್ಲಾಪುರಕ್ಕೆ ಬಾರದ ಕಾರಣ ಅದು ವಿಫಲವಾಯಿತು.

ಮೂರು ತಿಂಗಳಲ್ಲೇ ಕೊಲ್ಲುತ್ತೇವೆ ಎಂಬ ಬೆದರಿಕೆ ಪತ್ರಗಳು ಶಾಹು ಮಹಾರಾಜರಿಗೆ ಬಂದಿದ್ದವು. ಇದರ ಕುರಿತು ಮಹಾರಾಜರು ತಮ್ಮ ಸ್ನೇಹಿತ ಕ್ಲಾಡ್ ಹಿಲ್ಲ್  ಅವರಿಗೆ ಬರೆದ ಪತ್ರದಲ್ಲಿ  “ನಾನು ಪೂಣೆಯಿಂದ
ಕೊಲ್ಹಾಪುರಕ್ಕೆ ಬರುವಾಗ ರಸ್ತೆಯಲ್ಲಿ ಬಾಂಬ ಇಟ್ಟಿದ್ದರು. ಅದು ತಡಮಾಡಿ ಸ್ಫೋಟವಾಗಿದ್ದರಿಂದ ಕುದುರೆಗಳಿಗೆ ಗಾಯವಾಗಿವೆ. ನಾನು ಪ್ರಾಣಾಪಾಯದಿಂದ ಪಾರಾದೆ” ಎಂದು ಹೇಳಿದ್ದಾರೆ.

ಮೇ 6, 1922 ರಂದು ಲೋನಾವಳಾದ ಲಾಡ್ಜ್ ವೊಂದರಲ್ಲಿ ಮಲಗಿದ್ದ ಶಾಹು ಮಹಾರಾಜರು ಬೆಳಿಗ್ಗೆ ಏಳಲೇ ಇಲ್ಲ. ಅಂದು ಭಾರತದ ಇತಿಹಾಸದ ಕ್ರಾಂತಿಕಾರಿ ಯುಗವೊಂದು ಅಂತ್ಯ ಕಂಡಿತ್ತು. ಶಾಹು ಮಹಾರಾಜರ ಸಾಮಾಜಿಕ ಹೋರಾಟದ ದಿಟ್ಟ ನಿರ್ಧಾರಗಳನ್ನು ನೋಡಿದರೆ ಅವರ ಬಗ್ಗೆ ಇನ್ನೂ ಓದಬೇಕು ಎನ್ನುವ ಹುಮ್ಮಸ್ಸು ನಮ್ಮಲ್ಲಿ ಉಕ್ಕುತ್ತದೆ. ಅದರಂತೆ ಅವರ ಕೊನೆಯ ಮೇ 6 ರ ದಿನದ ನೆನಪು ಮನಸ್ಸಿಗೆ ಇನ್ನಷ್ಟು ನಾಟುವಂತೆ ಮಾಡುತ್ತದೆ.


ನ್ಯಾಯವಾದಿ ಸುರೇಂದ್ರ ಉಗಾರೆ

ಬೆಳಗಾವಿ.

Leave a Reply

Your email address will not be published. Required fields are marked *

You cannot copy content of this page