ಕೊರೊನಾ‌ ಇಂಜೆಕ್ಷನ್ ಬೇಕಾಬಿಟ್ಟಿ ಬೆಲೆಗೆ ಮಾರುತ್ತಿರುವ ಕಂಪೆನಿ

ನವದೆಹಲಿ: ಕೊರೋನಾಪೀಡಿತರ ಚಿಕಿತ್ಸೆಗೆ ಅಮೆರಿಕದಲ್ಲಿ ವ್ಯಾಪಕವಾಗಿ ಬಳಸುತ್ತಿರುವ ರೆಮ್‌ಡೆಸಿವಿರ್‌ ಔಷಧವನ್ನು ಭಾರತದಲ್ಲೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಅಮೆರಿಕ ಮೂಲದ ಗಿಲಿಯಡ್‌ ಸೈನ್ಸಸ್‌ ಕಂಪನಿಗೆ ಅನುಮತಿ ನೀಡಿದೆ. ಆದರೆ ಈ ಔಷಧ ಮಾರಲು ಲೈಸೆನ್ಸ್‌ ಪಡೆದಿರುವ ವಿತರಕ ಕಂಪನಿಗಳು 100 ಮೈಕ್ರೋಗ್ರಾಂನ 1 ವಯಲ್‌ ಇಂಜೆಕ್ಷನ್‌ಗೆ 7000 ರು. ವಿಧಿಸುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಭಾರತದಲ್ಲಿ ರೆಮ್‌ಡೆಸಿವಿರ್‌ ಮಾರಲು ಅನುಮತಿ ಪಡೆದಿರುವ ಕಂಪನಿಯೊಂದು ಒಂದು ಇಂಜೆಕ್ಷನ್‌ಗೆ 7000 ರು. ಬೆಲೆ ಹೇಳುತ್ತಿದೆ. ಕೊರೋನಾಪೀಡಿತರು ಒಟ್ಟು ಐದು ದಿನ ಇಂಜೆಕ್ಷನ್‌ ಪಡೆಯಲು ಸರ್ಕಾರ ಅನುಮತಿ ನೀಡಿದೆ. ಆ ಲೆಕ್ಕದಲ್ಲಿ, ಒಬ್ಬ ರೋಗಿ ರೆಮ್‌ಡೆಸಿವಿರ್‌ ಮೂಲಕ ಚೇತರಿಸಿಕೊಳ್ಳಲು 35 ಸಾವಿರದಿಂದ 42 ಸಾವಿರ ರು.ವರೆಗೂ ಹಣ ವ್ಯಯಿಸಬೇಕಾಗುತ್ತದೆ ಎಂದು ಮುಂಬೈ ಮೂಲದ ವೈದ್ಯರೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ಗಿಲಿಯಡ್‌ ಕಂಪನಿ ವೆಂಕ್ಲುರಿ ಎಂಬ ತನ್ನ ಬ್ರ್ಯಾಂಡ್‌ನಡಿ ಒಂದು ಕೋರ್ಸ್‌ ಇಂಜೆಕ್ಷನ್‌ಗೆ ಅಮೆರಿಕದಲ್ಲಿ 3.34 ಲಕ್ಷ ರು. ವಿಧಿಸುತ್ತಿದೆ. ಇದೇ ದರ ಯುರೋಪ್‌ನಲ್ಲಿ 3 ಲಕ್ಷ ರು. ಹಾಗೂ ಇತರೆ ಮಾರುಕಟ್ಟೆಗಳಲ್ಲಿ 1.5 ಲಕ್ಷ ರು. ಇದೆ ಎಂದು ಔಷಧ ಕಂಪನಿಗಳ ಅಂದಾಜು ಹೇಳುತ್ತದೆ.

ರೆಮ್‌ಡೆಸಿವಿರ್‌ ಅನ್ನು ಭಾರತದಲ್ಲಿ ಮಾರಾಟ ಮಾಡುವ ಸಂಬಂಧ ನಂಜನಗೂಡಿನಲ್ಲಿ ಘಟಕ ಹೊಂದಿರುವ ಜ್ಯುಬಿಲೆಂಟ್‌ ಲೈಫ್‌ ಸೈನ್ಸಸ್‌, ಸಿಪ್ಲಾ, ಮಿಲಾನ್‌, ಹೆಟೆರೋ ಕಂಪನಿಗಳ ಜತೆ ಗಿಲಿಯಡ್‌ ಒಪ್ಪಂದ ಮಾಡಿಕೊಂಡಿದೆ. ಆದರೆ ಭಾರತೀಯ ಔಷಧ ನಿಯಂತ್ರಕ ಸಂಸ್ಥೆಯಿಂದ ಈ ನಾಲ್ಕೂ ಕಂಪನಿಗಳಿಗೆ ಲೈಸೆನ್ಸ್‌ ಸಿಕ್ಕಿಲ್ಲ. ಅನುಮತಿಯ ನಿರೀಕ್ಷೆಯಲ್ಲಿ ಈ ಕಂಪನಿಗಳು ಇದ್ದು, ಔಷಧ ಮಾರಾಟಕ್ಕೆ ಸಜ್ಜಾಗಿವೆ. ಭಾರತದಲ್ಲೇ ಉತ್ಪಾದನೆ ಮಾಡಲೂ ಕೋರಿಕೆ ಇಟ್ಟಿವೆ. ಈ ನಡುವೆ, ಈ ಕಂಪನಿಗಳಿಗೆ ಬೆಲೆ ವಿಚಾರದಲ್ಲಿ ಗಿಲಿಯಡ್‌ ಕಂಪನಿ ಮುಕ್ತ ಸ್ವಾತಂತ್ರ್ಯ ನೀಡಿದೆ.

ರೆಮ್‌ಡೆಸಿವಿರ್‌ ಎಂಬುದು ಕೊರೋನಾ ಔಷಧವೇನಲ್ಲ. ವೈರಾಣು ನಿರೋಧಕ ಔಷಧವಾಗಿದ್ದು, ಕೊರೋನಾ ಚಿಕಿತ್ಸೆಗೂ ಇದನ್ನು ಅಮೆರಿಕದಲ್ಲಿ ಬಳಸಲಾಗುತ್ತಿದೆ. ರೋಗಿಗಳು ಸ್ಪಂದಿಸಿದ ಹಿನ್ನೆಲೆಯಲ್ಲಿ ಹಲವು ದೇಶಗಳು ಈ ಇಂಜೆಕ್ಷನ್‌ ಬಳಕೆಗೆ ಅನುಮತಿ ನೀಡಿವೆ.

Leave a Reply

Your email address will not be published. Required fields are marked *

You cannot copy content of this page