ಬೆಳಗಾವಿ ಜಿಲ್ಲೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದ ಅಜ್ಮೇರ್ ನಂಟಿನಿಂದ ಹೊರಬಂದ ಸತ್ಯ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಿಪ್ಪಾಣಿ ಬಳಿ ಇರುವ ಕೊಗನೊಳ್ಳಿ ಚೆಕ್ ಪೋಸ್ಟ್ ತಪ್ಪಿಸಿ, ಕಳ್ಳದಾರಿಯಿಂದ ಅಕ್ರಮವಾಗಿ ರಾಜ್ಯದಲ್ಲಿ ನುಸುಳಿದ್ದ, ಅಜ್ಮೇರ್ ನಿಂದ ಬಂದಿದ್ದ 38 ಮಂದಿಯನ್ನು, ರಾಜ್ಯದ ಗಡಿಯೊಳಗೆ ಬರುವ ಮುಂಚೆಯೇ ಅವರನ್ನೆಲ್ಲ ಕ್ವಾರಂಟೈನ್ ಮಾಡಿರುವ ಪೊಲೀಸರ ಕಾರ್ಯದಕ್ಷತೆ ಮತ್ತು ಸಮಯಪ್ರಜ್ಞೆ ಕುರಿತು ಎಲ್ಲೆಡೆಯಿಂದ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇಂದು ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಆ 38 ಮಂದಿಯ ಪೈಕಿ 30 ಜನರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಅವರಲ್ಲಿ 22 ಮಂದಿ ಬೆಳಗಾವಿ ಜಿಲ್ಲೆಯವರು. ಒಂದು ವೇಳೆ ಪೊಲೀಸರು ಸಮಯಪ್ರಜ್ಞೆ ಮೆರೆಯದೆ, ಅವರು ಜಿಲ್ಲೆಯೊಳಗೆ ನುಸುಳಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಊಹಿಸಿಕೊಂಡರೂ ಭಯ ಆಗುತ್ತದೆ. 22 ಮಂದಿ ಪ್ರತಿದಿನ 10 ಮಂದಿಯ ಸಂಪರ್ಕಕ್ಕೆ ಬಂದಿದ್ದರೂ, ಸಂಖ್ಯೆ ದ್ವಿಗುಣಗೊಳ್ಳುತ್ತ ಸಾಗಿ, ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರಗಳ ಲೆಕ್ಕದಲ್ಲಿ ಇರುತ್ತಿತ್ತು. ಪೊಲೀಸರು ಅದನ್ನು ತಪ್ಪಿಸಿದ್ದಾರೆ.

ಸೋಂಕಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಕ್ಕೇರಿ ತಾಲೂಕಿನವರು ಆಗಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಮತ್ತು ಗೋಟೂರಿನವರಾಗಿದ್ದಾರೆ. ನಿಪ್ಪಾಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಇದುವರೆಗೆ ಸೋಂಕಿತರು ಇರಲಿಲ್ಲ. ಆದರೆ ಅಜ್ಮೇರ್ ನಂಟು ಅವರಲ್ಲಿ ಸೋಂಕಿತ ತಾಲೂಕುಗಳ ಲಿಸ್ಟಿಗೆ ಸೇರಿಸಿದೆ. ರಾಯಬಾಗ ಮತ್ತು ಬೆಳಗಾವಿ ತಾಲೂಕಿನ ಕೆಲವು ಸೋಂಕಿತರು ಇದರಲ್ಲಿದ್ದಾರೆ. ಆದರೆ, ಅವರನ್ನೆಲ್ಲ ಗಡಿಯೊಳಗೆ ಪ್ರವೇಶಿಸುವ ಮುನ್ನ ಅಂದರೆ ಇನ್ನೊಬ್ಬರ ಸಂಪರ್ಕಕ್ಕೆ ಬರುವ ಮುನ್ನವೇ ವಶಕ್ಕೆ ಪಡೆದಿದ್ದರಿಂದ ಯಾರೂ ಆತಂಕ ಪಡಬೇಕಾಗಿಲ್ಲ. ಸೋಂಕಿತರ ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸುವ ಅಗತ್ಯ ಇಲ್ಲ.

ಏನೆ ಆಗಲಿ, ಅಜ್ಮೇರ್ ನಂಟಿನಿಂದಾಗಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಒಟ್ಟು 107 ಪ್ರಕರಣಗಳ ಮೂಲಕ ಎರಡನೇ ಸ್ಥಾನಕ್ಕೆ ಏರಿದೆ. ಬೆಂಗಳೂರು ಮೊದಲನೆ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿದ್ದ ಮೈಸೂರು ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಪೊಲೀಸರು ಅಕ್ರಮವಾಗಿ ರಾಜ್ಯದ ಗಡಿಯೊಳಗೆ ನುಸುಳುತ್ತಿದ್ದವರನ್ನು ವಶಕ್ಕೆ ಪಡೆದಿದ್ದರೂ, ಹಾಗೆ ನುಸುಳಿ ಬರಲಿಕ್ಕೆ ಅಲ್ಲಿ ಒಂದು ದಾರಿ ಇದುವರೆಗೆ ಇತ್ತು ಎನ್ನುವುದು ಇದರಿಂದ ಗೊತ್ತಾಗಿದೆ. 38 ಮಂದಿಯ ಸಹಿತ ಒಂದು ಬಸ್ ಚೆಕ್ ಪೋಸ್ಟ್ ತಪ್ಪಿಸಿ, ರಾಜ್ಯದ ಗಡಿಯೊಳಗೆ ಬಂದಿತ್ತು ಅಂದರೆ ಏನರ್ಥ. ಅಜ್ಮೇರ್ ಗೆ ಹೋದವರು ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿಯೇ ಜನರಿಂದ ಮಾಹಿತಿ ಪಡೆದು ಯಶಸ್ವಿಯಾಗಿ ರಾಜ್ಯದ ಗಡಿಯೊಳಗೆ ಬಂದಿದ್ದರು. ದುರಾದೃಷ್ಟಕ್ಕೆ ಪೊಲೀಸರ ಕೈಗೆ ಸಿಕ್ಕಿಕೊಂಡರು. ಹಾಗೆ ಪೊಲೀಸರ ಕೈಗೆ ಸಿಕ್ಕಿಕೊಳ್ಳದೆ ಗಡಿಯೊಳಗೆ ಇನ್ನೆಷ್ಟು ಜನರು ನುಗ್ಗಿ ಬಂದಿರಬಹುದು ಎನ್ನುವ ಆತಂಕ ಈಗ ಜಿಲ್ಲೆಯ ಜನರನ್ನು ಕಾಡತೊಡಗಿದೆ. ಚೆಕ್ ಪೋಸ್ಟ್ ತಪ್ಪಿಸಲು ಇರುವ ಅಷ್ಟು ದೊಡ್ಡ ರಸ್ತೆಗೆ ಪೊಲೀಸ್ ಬಂದೋಬಸ್ತ್ ಇರಲಿಲ್ಲವೇ? ಇರಲಿಲ್ಲ ಎಂದರೆ ಇದು ಪೊಲೀಸರ ದೊಡ್ಡ ಬೇಜವಾಬ್ದಾರಿಯಾಗುತ್ತದೆ. ಈ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸಬೇಕಾದ ಅಗತ್ಯವಿದೆ.

Leave a Reply

Your email address will not be published. Required fields are marked *

You cannot copy content of this page