ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ದಿನವಿನ್ನು ‘ದಾಸೋಹ ದಿನ’ ವೆಂದು ಆಚರಣೆ: ಸರ್ಕಾರದ ಮಹತ್ವದ ತೀರ್ಮಾನ

ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ದಿನವಿನ್ನು ‘ದಾಸೋಹ ದಿನ’ ವೆಂದು ಆಚರಣೆ: ಸರ್ಕಾರದ ಮಹತ್ವದ ತೀರ್ಮಾನ

 

ಬೆಳಗಾವಿ: ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಲಿಂಗೈಕ್ಯವಾದ ದಿನವನ್ನು ಇನ್ನು ಮುಂದೆ ‘ದಾಸೋಹ ದಿನ’ವೆಂದು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ)ಯ ಆಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಸ್ವಾಮೀಜಿಯವರ ಲಿಂಗೈಕ್ಯ ದಿನವಾದ ಜನೆವರಿ 21 ‘ದಾಸೋಹ ದಿನ’ ವಾಗಿ ರಾಜ್ಯಾದ್ಯಂತ ಆಚರಣೆಯಾಗಲಿದೆ.

 

ಸಂಬಂಧಪಟ್ಟ ಇಲಾಖೆಗಳು ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಪ್ರತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಡೆದುಕೊಂಡು ‘ದಾಸೋಹ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲು ರೂಪುರೇಷೆಗಳನ್ನು ತಯಾರಿಸಿ ಕಾರ್ಯಕ್ರಮವನ್ನು ಜಾರಿಗೊಳಿಸಬೇಕೆಂದು ಆದೇಶದಲ್ಲಿ ತಿಳಿಸಿಲಾಗಿದೆ.

 

ತ್ರಿವಿಧ ದಾಸೋಹಿ ಶ್ರೀಗಳು 1930 ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದಲೂ ನಿರಂತರವಾಗಿ ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ-ಧರ್ಮ ಭೇದವಿಲ್ಲದೆ ವಿದ್ಯೆ, ವಸತಿ, ದಾಸೋಹ ನೀಡಿ ತ್ರಿವಿಧ ದಾಸೋಹಿಗಳಾಗಿದ್ದರು. 1960 ರಲ್ಲಿ ಇಡೀ ದೇಶವೇ ಆಹಾರದ ಕೊರತೆಯನ್ನು ಎದುರಿಸುತ್ತಿರುವಾಗ ಸ್ವತ: ಜೋಳಿಗೆ ಹಿಡಿದು ಜನರಿಂದ ದಾನ ಪಡೆದು ಹಸಿವು ನೀಗಿಸಿದವರು. ಆವರು ಹಾಕಿಕೊಟ್ಟ ಪರಂಪರೆಯಂತೆ ಇಂದಿಗೂ ಮಠದ ವತಿಯಿಂದ ಸಾವಿರಾರು ಬಡ ಮಕ್ಕಳಿಗೆ ಮತ್ತು ಭಕ್ತರಿಗೆ ನಿತ್ಯ ದಾಸೋಹ ನಡೆಯುತ್ತಿದೆ. ಒಂಭತ್ತು ದಶಕಗಳಿಗೂ ಮೀರಿ ದಾಸೋಹಗೈಯುವ ಮೂಲಕ ಶ್ರೀಗಳು ನಾಡಿನ ಇತರೆ ಎಲ್ಲರಿಗೂ ಮಾದರಿಯಾಗಿದ್ದು ದಾಸೋಹ ಶ್ರೇಷ್ಠರಾಗಿದ್ದಾರೆ. ಶ್ರೀಗಳ ಕೈಂಕರ್ಯ ಕಂಡು ಸರ್ಕಾರ 2007 ರಲ್ಲಿ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಿತ್ತು.

 

ಶ್ರೀಗಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಲಿಂಗೈಕ್ಯರಾಗಿದ್ದು, ಅವರು ನಿತ್ಯಪೂಜ್ಯರಾಗಿದ್ದಾರೆ. ಅವರ ಅಭೂತಪೂರ್ವ ಸೇವೆಯನ್ನು ಸ್ಮರಿಸಲು ಸರ್ಕಾರ ಅವರ ಲಿಂಗೈಕ್ಯ ದಿನವಾದ ಜನೆವರಿ 21 ನ್ನು ‘ದಾಸೋಹ ದಿನ’ ಎಂದು ಆಚರಿಸಲು ತೀರ್ಮಾನಿಸಿದೆ.