
ದೆಹಲಿಯಲ್ಲಿ ರೈತರ ಪ್ರತಿಭಟನೆ; ಬೆಲೆ ಕಳೆದುಕೊಂಡ ಬೆಳಗಾವಿ ಗೆಣಸು
ಬೆಳಗಾವಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕಾವು ಬೆಳಗಾವಿ ಮತ್ತು ಖಾನಾಪೂರ ತಾಲೂಕುಗಳ ಗೆಣಸು ಬೆಳೆಗಾರರಿಗೂ ತಟ್ಟಿದ್ದು, ಗೆಣಸಿನ ಬೆಲೆ ಅರ್ಧಕ್ಕೂ ಹೆಚ್ಚು ಕುಸಿದಿದೆ. ಹೀಗಾಗಿ ಈ ಭಾಗದ ಗೆಣಸು ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಬೆಳಗಾವಿ ಮತ್ತು ಖಾನಾಪೂರ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗೆಣಸು ಬೆಳೆಯಲಾಗುತ್ತದೆ ಮತ್ತು ಅದು ಬಹಳಷ್ಟು ದೆಹಲಿ ಮತ್ತು ಉತ್ತರ ಭಾರತಕ್ಕೆ ರಫ್ತಾಗುತ್ತದೆ. ಆದರೆ, ಕಳೆದ ಮೂರು ವಾರಗಳಿಂದ ದೆಹಲಿಯಲ್ಲಿ ರೈತರು ರಾಷ್ಟ್ರ ರಾಜಧಾನಿಯ ಬಹುತೇಕ ರಸ್ತೆಗಳಲ್ಲಿ ಧರಣಿ ಮುಂದುವರಿಸಿದ್ದು, ಇದು ಗೆಣಸಿನ ರಫ್ತಿಗೆ ಅಡಚಣೆಯಾಗಿದೆ.
ಬೆಳಗಾವಿ ಎಪಿಎಂಸಿ ಮೂಲಗಳ ಪ್ರಕಾರ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾರಣ ಗೆಣಸಿನ ದರ ರೂ 2,000 ದಿಂದ ರೂ.700 ರಿಂದ 800 ಕ್ಕೆ ಕುಸಿದಿದೆ. ಲಾರಿಗಳ ಡ್ರೈವರ್ ಗಳು ರಿಸ್ಕ್ ತೆಗೆದುಕೊಂಡು ದೆಹಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಪ್ರತಿವರ್ಷ ಸುಮಾರು 7 ಸಾವಿರ ಕ್ವಿಂಟಲ್ ಗೆಣಸು ಬೆಳಗಾವಿಯಿಂದ ದೆಹಲಿಗೆ ರಫ್ತಾಗುತ್ತದೆ. ಆದರೆ ಈ ಬಾರಿ ಕೇವಲ 800 ಕ್ವಿಂಟಲ್ ಮಾತ್ರ ರಫ್ತಾಗಿದೆ. ಗೆಣಸನ್ನು ಬಹಳಷ್ಟು ದಿನ ಸಂಗ್ರಹಿಸಿಟ್ಟುಕೊಳ್ಳಲು ಆಗುವುದಿಲ್ಲ. ಇಟ್ಟರೆ ಕೆಡುತ್ತವೆ ಎನ್ನುವ ಕಾರಣಕ್ಕೆ ರೈತರು ಸಿಗುವ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಸಪ್ಟೆಂಬರ್ ನಿಂದ ಮಾರ್ಚ್ ವರೆಗೆ ಗೆಣಸಿನ ಸೀಜನ್ ಇರುತ್ತದೆ. ದೆಹಲಿ ಅಷ್ಟೇ ಅಲ್ಲದೆ ಉತ್ತರ ಪ್ರದೇಶ ಮತ್ತು ಪಂಜಾಬಿಗೂ ಇಲ್ಲಿಯ ಗೆಣಸು ಸರಬರಾಜು ಆಗುತ್ತದೆ. ಸಿಹಿ ಗೆಣಸನ್ನು ಶಾಬುದಾನಿ ತಯಾರಿಕೆಗೂ ಬಳಸಲಾಗುತ್ತದೆ. ಒಟ್ಟಿನಲ್ಲಿ ಈ ಬಾರಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಳಗಾವಿ ರೈತರ ಪಾಲಿಕೆ ಸಂಕಷ್ಟ ತಂದಿದೆ.