ಪಾಲಿಕೆ ಚುನಾವಣೆ: ಈ ಬಾರಿಯ ಫಲಿತಾಂಶದ ಹಲವು ಅಚ್ಚರಿಗಳು

ಪಾಲಿಕೆ ಚುನಾವಣೆ: ಈ ಬಾರಿಯ ಫಲಿತಾಂಶದ ಹಲವು ಅಚ್ಚರಿಗಳು

 

 

ಬೆಳಗಾವಿ: ಈ ಬಾರಿ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಹಲವಾರು ವೈಶಿಷ್ಠ್ಯಗಳಿಗೆ ಕಾರಣವಾಗಿದ್ದು, ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಬಿಜೆಪಿಗೂ ಅಚ್ಚರಿಯಾಗುವಂತೆ ನಗರದ ಮತದಾರ ಫಲಿತಾಂಶ ನೀಡಿದ್ದು, ಎಂಇಎಸ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಶಾಕ್ ನೀಡಿದ್ದಾನೆ. ತಡವಾಗಿ ಎಚ್ಚರಗೊಂಡಿದ್ದ ಕಾಂಗ್ರೆಸ್ ಮಕಾಡೆ ಮಲಗಿದ್ದು, ಅದರ ಎಲ್ಲ ತಂತ್ರಗಾರಿಕೆಗಳು ಫೇಲ್ ಆಗಿವೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಕೂಡ ಒಂದು ಸ್ಥಾನ ಗೆಲ್ಲುವ ಮೂಲಕ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

 

 

ಜಾರಕಿಹೊಳಿ, ಹೆಬ್ಬಾಳಕರ, ಸೇಠ ವಾರ್ಡ್ ನಲ್ಲಿಯೇ ನೆಲಕಚ್ಚಿದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷದ ಘಟಾನುಘಟಿಗಳಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಶಾಸಕ ಫಿರೋಜ್ ಸೇಠ್ ಮೊದಲಾದವರ ಮನೆಗಳು ಇರುವುದು ನಗರದ ವಾರ್ಡ್ 32 ರಲ್ಲಿ. ಆದರೆ ಇಲ್ಲಿಯೇ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ಅನಂತಕುಮಾರ ಬ್ಯಾಕೂಡ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದಾರೆ.

 

 

ವಿ.ಎಸ್.ಕೌಜಲಗಿ ಸೊಸೆಗೆ ಸೋಲು

ಮಾಜಿ ಕೆಪಿಸಿಸಿ ಅಧ್ಯಕ್ಷ ಹಾಗೂ ಏಳು ಬಾರಿ ಅರಭಾವಿ ಕ್ಷೇತ್ರದಿಂದ ಆಯ್ಕೆಯಾಗಿ ಸರ್ಕಾರದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದ ದಿ.ವಿ.ಎಸ್.ಕೌಜಲಗಿ ಅವರ ರಾಜಕೀಯ ಜೀವನ 2003 -04 ರ ಚುನಾವಣೆ ನಂತರ ಅಂತ್ಯಗೊಂಡಿತ್ತು. ಜನತಾ ದಳದಿಂದ ಸ್ಪರ್ಧಿಸಿದ್ದ ಬಾಲಚಂದ್ರ ಜಾರಕಿಹೊಳಿ ಎದುರು ಕೌಜಲಗಿ ಸೋಲು ಅನುಭವಿಸಿದ್ದರು. ಆ ಚುನಾವಣೆಯ ಸಂಪೂರ್ಣ ಉಸ್ತುವಾರಿ ಸತೀಶ ಜಾರಕಿಹೊಳಿ ವಹಿಸಿದ್ದರು. ಆ ನಂತರ ಕೌಜಲಗಿ ಅವರ ಕುಟುಂಬ ರಾಜಕೀಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಆವರ ಸುಪುತ್ರ ರಾಜದೀಪ ಕೂಡ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿ.ಎಸ್.ಕೌಜಲಗಿ ಅವರ ಸೊಸೆ ಸೀಮಾ ರಾಜದೀಪ ಕೌಜಲಗಿ ವಾರ್ಡ್ 29 ರಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಎದುರು ಸೋತಿದ್ದಾರೆ.

 

 

ಘಟಾನುಘಟಿ ಸದಸ್ಯರು ಈ ಬಾರಿ ಪಾಲಿಕೆಯಲ್ಲಿ ಇರುವುದಿಲ್ಲ

ಕಳೆದ ಪಾಲಿಕೆಯಲ್ಲಿ ಕನ್ನಡ ಗುಂಪಿನ ಪರವಾಗಿ ದೀಪಕ ಜಮಖಂಡಿ ಹಾಗೂ ಮರಾಠಿ ಗುಂಪಿನಿಂದ ಪಂಢರಿ ಪರಬ ಪ್ರಖರ ವಾದಗಳನ್ನು ಮಂಡಿಸುತ್ತಿದ್ದರು. ಕನ್ನಡ ಗುಂಪಿನ ಪರವಾಗಿ ರಮೇಶ ಸೊಂಟಕ್ಕಿ ಕೂಡ ಅದ್ಭುತವಾಗಿ ವಿಷಯಗಳನ್ನು ಮಂಡಿಸುತ್ತಿದ್ದರು. ಆದರೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ ಜಮಖಂಡಿ ಹಾಗೂ ರಮೇಶ ಸೊಂಟಕ್ಕಿ ಮತ್ತು ಎಂಇಎಸ್ ನಿಂದ ಸ್ಪರ್ಧಿಸಿದ್ದ ಪಂಢರಿ ಪರಬ ಅವರನ್ನು ಮತದಾರರು ಸೋಲಿಸಿದ್ದಾರೆ. ದೀಪಕ ಜಮಖಂಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ ಅವರನ್ನು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನುವ ಕಾರಣ ನೀಡಿ ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು.

 

 

ಇಮೇಜ್ ಹೆಚ್ಚಿಸಿಕೊಂಡ ನಗರದ ಬಿಜೆಪಿ ಶಾಸಕರು

ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದ್ದರಿಂದ, ಸದಸ್ಯರ ಆಯ್ಕೆಗೆ ತಮ್ಮದೇ ಪ್ರಭಾವ ಬೀರಿದ್ದ ಬಿಜೆಪಿಯ ಶಾಸಕರಾದ ದಕ್ಷಿಣ ಕ್ಷೇತ್ರದ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಅನಿಲ ಬೆನಕೆ ವರ್ಚಸ್ಸು ಸಹಜವಾಗಿಯೇ ಹೆಚ್ಚಾಗಿದೆ. ಪಕ್ಷದ ಚಿಹ್ನೆಯ ಮೇಲೆಯೇ ಪಾಲಿಕೆ ಚುನಾವಣೆ ಎದುರಿಸುವ ಕುರಿತಂತೆ ಶಾಸಕ ಅಭಯ ಪಾಟೀಲ ಪಕ್ಷದ ವರಿಷ್ಠರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಪ್ರಯತ್ನದಲ್ಲಿಯೇ ಬಹುಮತದ ಫಲಿತಾಂಶ ಬಂದಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

 

 

ವೈಟ್ ವಾಶ್ ಆಗುತ್ತಾ ಎಂಇಎಸ್?

ಹಲವು ದಶಕಗಳಿಂದ ಪಾಲಿಕೆಯ ಮೇಲೆ ಅಧಿಕಾರ ನಡೆಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಈ ಚುನಾವಣೆಯಲ್ಲಿ ಅಕ್ಷರಶ: ಧೂಳೀಪಟವಾಗಿದ್ದು, ಕೇವಲ ಮೂರ್ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿದೆ. ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಹಲವಾರು ಘಟಾನುಘಟಿ ನಾಯಕರು ಸೋತು ಮುಖಭಂಗ ಅನುಭವಿಸಿದ್ದಾರೆ. ಈಗ ಆಯ್ಕೆಯಾಗಿರುವ ಸದಸ್ಯರೂ ಕೂಡ ಅನಿವಾರ್ಯವಾಗಿ ರಾಷ್ಟ್ರೀಯ ಪಕ್ಷಗಳತ್ತ ವಾಲಿದಲ್ಲಿ, ಪಾಲಿಕೆಯಲ್ಲಿ ಎಂಇಎಸ್ ಸಂಪೂರ್ಣ ವೈಟ್ ವಾಶ್ ಆಗಲಿದೆ. ಭಾಷೆಯ ಆಧಾರದಲ್ಲಿ ಮರಾಠಿ ಭಾಷಿಕರನ್ನು ಪ್ರಚೋದಿಸಲು ಕೊನೆಯ ಹಂತದವರೆಗೂ ಎಂಇಎಸ್ ನಾಯಕರು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ.