ರಸ್ತೆಯಲ್ಲೇ ಹೊಡೆದಾಟ; ಸಿಪಿಐ ಕಲ್ಯಾಣಶೆಟ್ಟಿ ಮತ್ತು ಇತರೆ 20 ಕ್ಕೂ ಹೆಚ್ಚು ಮಂದಿಯ ಮೇಲೆ ಎಫ್ಐಆರ್ ದಾಖಲು

ಬೆಳಗಾವಿ: ತಾಲೂಕಿನ ನಾವಗೆ ಬಳಿ ಎರಡು ವಾಹನಗಳ ಢಿಕ್ಕಿ ಸಂಭವಿಸಿದ ಬಳಿಕ ಎರಡೂ ವಾಹನಗಳಲ್ಲಿ ಇದ್ದವರು ರಸ್ತೆಯಲ್ಲಿಯೇ ಹೊಡೆದಾಟ ನಡೆಸಿದ್ದಕ್ಕೆ ಸಂಬಂಧಪಟ್ಟಂತೆ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಸೇರಿದಂತೆ ಒಟ್ಟು 20 ಮಂದಿಯ ಮೇಲೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರು ಜಾಂಬೋಟಿ ಬಳಿಯ ರೆಸಾರ್ಟ್ ನಲ್ಲಿ  ತಮ್ಮ ಪುತ್ರನ ಹುಟ್ಟು ಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ, ಅವರ ಅಳಿಯ ಇದ್ದ ವಾಹನವು ಬೆಳಗಾವಿ ಕಡೆಯಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಗುದ್ದಿದ ಬಳಿಕ ಈ ಅನಾಹುತ ನಡೆದಿದೆ. ಮೊದಲು ಆರಂಭಗೊಂಡ ಮಾತಿನ ಚಕಮಕಿ ಬಳಿಕ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಎನ್ನಲಾಗಿದೆ. ಹೊಡೆದಾಟ ನಡೆಯುವ ಸ್ಥಳಕ್ಕೆ ಸಿಪಿಐ ಕಲ್ಯಾಣಶೆಟ್ಟಿ ತಕ್ಷಣ ಬಂದರೂ ಕೂಡ ಘರ್ಷಣೆ ಮುಂದುವರಿದಿತ್ತು ಎಂದು ಹೇಳಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಬೆಳಗಾವಿ ಶಹಾಪುರ ಅಳವನಗಲ್ಲಿ ನಿವಾಸಿ ಪ್ರಿಯಾಂಕಾ ಸುನೀಲ ಕುರಣಕರ ನೀಡಿದ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ ದೂರಿನ ಮೇರೆಗೆ ಗುರುರಾಜ ಕಲ್ಯಾಣಶೆಟ್ಟಿ, ತುಷಾರ್ ಮನೋಹರ್ ಡೋಹಿಜ್ ಮತ್ತು ಇನ್ನೂ 4 ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನು ತುಷಾರ್ ಮನೋಹರ್ ಡೋಯಿಜ್ ಎನ್ನುವವರು ನೀಡಿದ ದೂರಿನ ಮೇರೆಗೆ ಸುನೀಲ ಲಕ್ಷ್ಮಣ ಕುರಣಕರ, ರೂಪೇಶ ಮಹಾದೇವ ಪಾಟೀಲ. ಸಮರ್ಥ ಕುರಣಕರ, ಅನಿಲ ಕುರಣಕರ, ಪ್ರಿಯಾಂಕಾ ಕುರಣಕರ, ಮತ್ತು 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page