ಬೆಳಗಾವಿ: ಈಗ ಫೈಜರ್ ಲಸಿಕೆಯ ಬಗ್ಗೆ ಎಲ್ಲೆಲ್ಲಿಯೂ ಚರ್ಚೆ ನಡೆಯುತ್ತಿದೆ. ಕೊರೊನಾಗೆ ರಾಮಬಾಣ ಎಂದೇ ಬಣ್ಣಿಸಲಾಗುತ್ತಿರುವ ‘ಫೈಜರ್’ ಲಸಿಕೆ ಪಡೆದಿದ್ದ ಕ್ಯಾಲಿಫೋರ್ನಿಯಾದ ನರ್ಸ್ ಒಬ್ಬಳಿಗೆ ಲಸಿಕೆ ಪಡೆದ ವಾರದಲ್ಲಿಯೇ ಕೊರೊನಾ ಪಾಜಿಟಿವ್ ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ.
ಮೊದಲ ಡೋಸ್ ನಲ್ಲಿ ಶೇ 50 ರಷ್ಟು ಮತ್ತು ಎರಡನೇ ಡೋಸ್ ನಲ್ಲಿ ಶೇ 95 ರಷ್ಟು ಪರಿಣಾಮಕಾರಿ ಆಗಿದೆ ಎನ್ನುವ ಕಾರಣಕ್ಕೆ ಬ್ರಿಟಿಷ್ ಸರ್ಕಾರ ‘ಫೈಜರ್’ ಲಸಿಕೆ ಬಳಸಲು ಅನುಮತಿ ನೀಡಿತ್ತು. ಆದರೆ ಇದನ್ನು ಪಡೆದಿದ್ದ ನರ್ಸ್ ಒಬ್ಬರಿಗೆ ವಾರದಲ್ಲಿಯೇ ಕೊರೊನಾ ಕಾಣಿಸಿಕೊಂಡಿರುವುದು ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವುದರ ಮೇಲೆ ಪ್ರಶ್ನೆ ಎತ್ತಿದೆ.
ಕ್ಯಾಲಿಫೋರ್ನಿಯಾದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮ್ಯಾಥ್ಯೂ ಡಬ್ಲೂ ಎನ್ನುವ ಮಹಿಳೆ ಕ್ರಿಸ್ ಮಸ್ ರಜೆಗೂ ಮುನ್ನ ಫೈಜರ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ನಂತರ ಮುಂಜಾಗ್ರತಾ ಕ್ರಮವಾಗಿ ರಜೆ ಪಡೆದು ಮನೆಯಲ್ಲಿದ್ದರು. ಲಸಿಕೆ ಪಡೆದ ಬಳಿಕ ಸಂತೋಷದಿಂದ ತನ್ನ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ‘ನಾನು ಫೈಜರ್ ಲಸಿಕೆ ಪಡೆದಿದ್ದೇನೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ’ ಎಂದೂ ಬರೆದುಕೊಂಡಿದ್ದರು.
ಕ್ರಿಸ್ ಮಸ್ ರಜೆ ಮುಗಿದ ಬಳಿಕ ಕೆಲಸಕ್ಕೆ ಹಾಜರಾದ ಮಹಿಳೆಗೆ ಚಳಿ-ಜ್ವರ ಮತ್ತು ಮೈ-ಕೈ ನೋವು ಕಾಣಿಸಿಕೊಂಡಿತು. ಪರೀಕ್ಷೆ ಮಾಡಿಸಲಾಗಿ ಕೊರೊನಾ ಪಾಜಿಟಿವ್ ಇರುವ ಬರದಿ ಬಂದಿದೆ. ಫೈಜರ್ ಲಸಿಕೆ ಪಡೆದಿದ್ದ ಮಹಿಳೆಯಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.