‘ಗೋ ಹತ್ಯೆ ನಿಷೇಧ’ ಎನ್ನುವ ಬಿಜೆಪಿಯವರಿಂದಲೇ ಅತೀ ಹೆಚ್ಚು ಬೀಫ್ ವಿದೇಶಕ್ಕೆ ರಫ್ತು- ಸತೀಶ ಜಾರಕಿಹೊಳಿ

ಗೋಕಾಕ:  ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಕೂಗಾಡುವ ಬಿಜೆಪಿಯವರೇ ಅತೀ ಹೆಚ್ಚು  ಬೀಫ್(ಮಾಂಸ)ವನ್ನು ವಿದೇಶಗಳಿಗೆ ಸರಬರಾಜು ಮಾಡುತ್ತಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಗೋ ಹತ್ಯೆ ನಿಷೇಧ ಕಾಯ್ದೆ ಬಿಲ್ ಪಾಸ್ ಮಾಡಿದ್ದಾರೆ. ಆದ್ರೆ ಇದಕ್ಕೂ ಮೊದಲೇ ಕಾಂಗ್ರೆಸ್ ಈ ಬಿಲ್ ಪಾಸ್ ಮಾಡಿದೆ. ಇವರು ಕೆಲವು ತಿದ್ದುಪಡಿ ಮಾಡಿ  13 ವರ್ಷದ ಗೋವುಗಳ ಹತ್ಯೆಗೆ ಅವಕಾಶ ನೀಡಿದ್ದಾರೆ. ನಿಜವಾಗಿಯೂ ಕಾಯ್ದೆ ಜಾರಿಗೆ ತರುವ ಉದ್ದೇಶವಿದ್ರೆ  ಸಂಪೂರ್ಣ ಗೋ ಹತ್ಯೆಯನ್ನು ನಿಷೇಧ  ಮಾಡಬೇಕಿತ್ತು ಎಂದರು.

ಬಿಜೆಪಿಯವರು  ನೆಹರು  ಬಗ್ಗೆ ಹೆಚ್ಚು ಟೀಕೆ ಮಾಡುತ್ತಾರೆ. ಎಲ್ಲದಕ್ಕೂ ನೆಹರು ಅವರನ್ನೇ ದೋಷಿಸುತ್ತಾರೆ.   ನಿಜಾಂಶ ಎಂದ್ರೆ ದೇಶ ಇಷ್ಟು ಪ್ರಗತಿ ಹೊಂದಲು  ನೆಹರು ಅವರೇ ಕಾರಣ. ಅವರ ಪರಿಕಲ್ಪನೆಯಿಂದಲೇ ದೇಶ ಅಭಿವೃದ್ದಿ ಹೊಂದಿದೆ. ಖಾಸಗಿ ಸಂಸ್ಥೆಗಳನ್ನು, ನೀರಾವರಿ ಯೋಜನೆ, ಡ್ಯಾಂ ನಿರ್ಮಾಣ,  ಮೆಡಿಕಲ್ ಕಾಲೇಜು, ಐಐಟಿ, ವಿಮಾನ ನಿಲ್ದಾಣ ಇವೆಲ್ಲವೂ ನೆಹರು ಅವರ ಕೊಡುಗೆಯಾಗಿವೆ ಎಂದರು.

ಬಿಜೆಪಿಯವರು ಒಂದೇ ಒಂದು ಡ್ಯಾಂ ಕಟ್ಟಿದ್ದಾರಾ? ಎಂದು  ಪ್ರಶ್ನಿಸಿದ ಶಾಸಕ  ಸತೀಶ ಜಾರಕಿಹೊಳಿ,  ಬಿಜೆಪಿಯವರದ್ದೇನಿದ್ದರು  ಸರ್ಜಿಕಲ್ ಸ್ಟ್ರೈಕ್,   ಗೋಹತ್ಯೆ ನಿಷೇಧ, ಲವ್ ಜಿಹಾದ್ ಇಷ್ಟೇ ಇವರ ಸಾಧನೆ ಎಂದು ವಾಗ್ದಾಳಿ ನಡೆಸಿದರು. 

 ದೇಶಭಕ್ತಿ ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಬಂದಿರುತ್ತದೇ ಅದನ್ನು ಯಾರಿಂದಲೂ ಕಲಿಯಬೇಕಿಲ್ಲ. ದೇಶಭಕ್ತಿ ಹೆಸರಲ್ಲಿ   ಬಿಜೆಪಿಯವರು ಜನತೆಯನ್ನು ಇಬ್ಭಾಗ ಮಾಡುತ್ತಿದ್ದಾರೆ. ಸುಳ್ಳು ಹೇಳಿ, ಇತಿಹಾಸ ತಿರುಚಿ ಜನರಿಗೆ ಮರಳು ಮಾಡುತ್ತಿದ್ದಾರೆ.  ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದೇ ಅವರ ಹಿಡನ್ ಅಜೆಂಡಾ ಆಗಿದೆ ಎಂದು ಕಿಡಿ ಕಾರಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವು ಹೆಚ್ಚು ಗೌರವಿಸುತ್ತೇವೆ, ಎಸ್ಸಿ,ಎಸ್ಟಿ ಮಾತ್ರವಲ್ಲದೇ ಇಡೀ ದೇಶದ ಜನತೆಗೆ  ಸಮಾನತೆಯನ್ನು   ನೀಡಿದ್ದಾರೆ. ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡಿದ್ದಾರೆ.  ತುಳಿತಕ್ಕೊಳಗಾದವರಿಗೆ ನ್ಯಾಯ ಕಲ್ಪಿಸುವುದೇ ಬುದ್ದ, ಬಸವ, ಅಂಬೇಡ್ಕರ್ ಮೂವರು ಮಹಾನ್ ನಾಯಕರ ಆಶಯವಾಗಿತ್ತು  ಎಂದು ಸತೀಶ ಜಾರಕಿಹೊಳಿ ಹೇಳಿದರು.

ಯುವ ನಾಯಕ ರಾಹುಲ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ಪ್ರಕಾಶ ಡಾಂಗೆ, ವಿವೇಕ ಜತ್ತಿ, ಇಮ್ರಾಸ ತಪ್ಕಿರ, ಶಂಕರ ಗಿಡನ್ನವರ, ಬಸನಗೌಡ ಹೊಲೆಯಾಚೆ, ಮಂಜುಳಾ ರಾಮಗಾಣಟ್ಟಿ, ನಿಹಾಳ ಹುಳಿಕಟ್ಟಿ, ಉದಯ ತಳವಾರ,  ರಿಯಾಜ ಚೌಗಲಾ , ಪಾಂಡು‌ ಮನ್ನಿಕೆರಿ‌,  ಪರಸಪ್ಪ ಚುನ್ನಣ್ಣವರ ಕಾರ್ಯಕರ್ತರು  ಇದ್ದರು.

Leave a Reply

Your email address will not be published. Required fields are marked *

You cannot copy content of this page