ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಲು ಸತೀಶ ಜಾರಕಿಹೊಳಿ ಕರೆ

ಗೋಕಾಕ : ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣನವರು ಸೇರಿ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೆಲ್ಲ ಮುನ್ನಡೆಯಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಯೋಜಿಸಿದ್ದ ಗೋಕಾಕ್, ಮೂಡಲಗಿ ತಾಲ್ಲೂಕಿನ ಮಾದಿಗ ಸಮಾಜದ ಎಸ್ಸೆಸ್ಸೆಲ್ಸಿ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಲಿತ ಸಮುದಾಯದ ಜನರು ಎಲ್ಲ ರೀತಿಯಿಂದ ವಂಚಿತರಾಗಿದ್ದಾರೆ. ಈ ಸಮುದಾಯ ಈಗ ತಮ್ಮ ಏಳಿಗೆಗಾಗಿ ಪ್ರಯತ್ನ ಪಡಬೇಕು. ಮೂಜೆ, ಮಂತ್ರ, ಡಾಂಭಿಕತೆಯಿಂದ ದೂರ ಇರಬೇಕು. ಮೊದಲು ಇತಿಹಾಸವನ್ನು ತಿಳಿಯುವ ಪ್ರಯತ್ನ ಮಾಡಬೇಕು. ಇತಿಹಾಸ ತಿಳಿಯದವರು ಬದುಕುವುದು ಕಷ್ಟ. ಎಷ್ಟೇ ಹಣ , ಅಂತಸ್ತು ಮಾಡಿದರೂ ಪ್ರಯೋಜನವಿಲ್ಲ’ ಎಂದು ಸತೀಶ ಹೇಳಿದರು.

‘ಪೋಷಕರು ತಮ್ಮ ಮಕ್ಕಳಲ್ಲಿ ದೇವರನ್ನು ಕಾಣಬೇಕು.  ಹಬ್ಬ, ಜಾತ್ರೆ ಎಂದು ದುಂದು ವೆಚ್ಚ ಮಾಡುವ ಹಣವನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ಕರ್ಚು ಮಾಡಿ. ಇದರಿಂದ ಅವರ ಭವಿಷ್ಯ ರೂಪುಗೊಳ್ಳುತ್ತದೆ. ಯಾವುದೋ ಒಂದು ದೇವರ ಹೆಸರಿನಲ್ಲಿ ದೇವದಾಸಿ ಆಗುವ ಅನಿಷ್ಟ ಪದ್ಧತಿ, ಮೂಢನಂಬಿಕೆಯಿಂದ ಹೊರ ಬನ್ನಿ. ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡುವತ್ತ ಹೆಜ್ಜೆ ಹಾಕಿ’ ಎಂದು ಅವರು ಕರೆ ನೀಡಿದರು.

ಹಿಂದುಳಿದ ಸಮಾಜದವರು ಮುಖ್ಯ ವಾಹಿನಿಗೆ ಬರಬೇಕು ಎಂಬುವುದು ಅಂಬೇಡ್ಕರ್ ಅವರ ಕನಸಾಗಿತ್ತು. ಅದೇ ರೀತಿ ದಲಿತರು ತಮ್ಮ ಹಕ್ಕುಗಳನ್ನು ಪಡೆದು ಎಲ್ಲರಂತೆ ಬದುಕಲು ಕಲಿಯಬೇಕು. ಜತೆಗೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಗೌರವಿಸಿ, ರಕ್ಷಣೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಪ್ರತಿ ವರ್ಷ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸುವಂತ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸತೀಶ ಫೌಂಡೇಷನ್ ದಿಂದಲೂ ಸಹ ಹೆಚ್ಚಿನ ಸಹಾಯ ದೊರೆಯಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ 2019-20 ಸಾಲಿನಲ್ಲಿ ಎಸ್,ಎಸ್,ಎಲ್,ಸಿ, ವಾರ್ಷಿಕ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸತ್ಕರಿಸಲಾಯಿತು. ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಆಶಾ ಐಹೊಳೆ, ಮಾದಿಗ ಸಮಾಜ ಸೇವಾ ಸಮಿತಿ ತಾಲೂಕಾ ಅಧ್ಯಕ್ಷ ಬಸವರಾಜ ಕಾಡಾಪುರ, ಸ್ಥಳಿಯ ನಗರಸಭೆ ಸದಸ್ಯರು ಇತರರು ಇದ್ದರು.

Leave a Reply

Your email address will not be published. Required fields are marked *

You cannot copy content of this page