ಚಿಕ್ಕೋಡಿ ಹೆಸ್ಕಾಂ ವೃತ್ತದ ಅಧಿಕಾರಿಗಳಿಂದ ಟೆಂಡರ್ ನಿಯಮಗಳ ಉಲ್ಲಂಘನೆ; ಕ್ರಮಕ್ಕೆ ಆಗ್ರಹ

 ಚಿಕ್ಕೋಡಿ ಹೆಸ್ಕಾಂ ವೃತ್ತದ ಅಧಿಕಾರಿಗಳಿಂದ ಟೆಂಡರ್ ನಿಯಮಗಳ ಉಲ್ಲಂಘನೆ; ಕ್ರಮಕ್ಕೆ ಆಗ್ರಹ

 

ಬೆಳಗಾವಿ: ಚಿಕ್ಕೋಡಿ ಹೆಸ್ಕಾಂ ವೃತ್ತ ವ್ಯಾಪ್ತಿ ಅಡಿಯಲ್ಲಿ ಬರುವ ಎಲ್ಲಾ ವಿಭಾಗಗಳ ಟೆಂಡರ್ ಹೊರಡಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ನಿಯಮಗಳನ್ನು ಗಾಳಿಗೆ ತೂರಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಗುತ್ತಿಗೆದಾರರಿಗೆ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

 

 ಪರಿಶಿಷ್ಠ ಜಾತಿ ಮತ್ತು ಜನಾಂಗಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಟೆಂಡರ್ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕ ನಿಯಮ 1999 ಕ್ಕೆ ತಿದ್ದುಪಡಿ ತಂದು 2017 ರಲ್ಲಿ ಕರ್ನಾಟಕ ಅಧಿನಿಯಮ ಸಂಖ್ಯೆ 31ನ್ನು ಜಾರಿಗೆ ತಂದಿರುತ್ತದೆ. ತಿದ್ದುಪಡಿಯಾಗಿರುವ ಕಾಯ್ದೆ ಪ್ರಕಾರ ಕಾಮಗಾರಿಯ ಒಟ್ಟು ಮೊತ್ತವು ರೂ.50 ಲಕ್ಷಕ್ಕಿಂತ ಕಡಿಮೆ ಯೋಜನಾ ಗಾತ್ರದ್ದು ಆಗಿದ್ದಲ್ಲಿ 17.5% ಮತ್ತು 6.95% ಹೀಗೆ ಕ್ರಮವಾಗಿ ಎಸ್ ಸಿ ಮತ್ತು ಎಸ್ ಟಿ ಜನಾಂಗಕ್ಕೆ ನೀಡಬೇಕು. ಆದರೆ ಈ ಕಾಯ್ದೆಯನ್ನು ಚಿಕ್ಕೋಡಿ ಹೆಸ್ಕಾಂ ವೃತ್ತದ ಅಧಿಕಾರಿಗಳು ಸಾರಾಸಗಟಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ನ್ಯಾಯವಾದಿ ಉಗಾರೆ ದೂರಿನಲ್ಲಿ ತಿಳಿಸಿದ್ದಾರೆ.

 

 ದೂರಿನ ಪ್ರಕಾರ ಮೊದಲಿನಿಂದಲೂ ವಿಭಾಗೀಯ ಮಟ್ಟದಲ್ಲಿ ಗುತ್ತಿಗೆದಾರರಿಗೆ ಪೂರ್ಣಗುತ್ತಿಗೆ, ತುಂಡುಗುತ್ತಿಗೆ ಮತ್ತು ಕೂಲಿಗುತ್ತಿಗೆ ಎಂದು ವಿಂಗಡಿಸಿ ಕಾಮಗಾರಿಗಳನ್ನು ನೀಡುವ ಪದ್ಧತಿ ಇದೆ. ಆದರೆ ಹೆಸ್ಕಾಂನ ಚಿಕ್ಕೋಡಿ ವೃತ್ತದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ವಿಭಾಗಗಳಲ್ಲಿ ಉದ್ದೇಶಪೂರ್ವಕವಾಗಿ ಕಾಮಗಾರಿಗಳ ಮೊತ್ತವನ್ನು ಸ್ವಲ್ಪ ಹೆಚ್ಚಿಗೆ ತೋರಿಸಿ ಮೂರೂ ಪ್ರಕಾರದ ಗುತ್ತಿಗೆಗಳಿಂದ ಎಸ್ ಸಿ/ಎಸ್ ಟಿ ಜನಾಂಗವನ್ನು ಅವರ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸುವ ಗುತ್ತಿಗೆದಾರರಿಗೆ ಇಲ್ಲಸಲ್ಲದ ಆರೋಪ ಹೊರಿಸಿ ಲೈಸನ್ಸ್ ರದ್ದುಪಡಿಸುವ ಬೆದರಿಕೆ ಹಾಕಲಾಗುತ್ತಿದೆ.

 

ಕೂಡಲೇ ನಡೆದಿರುವ ತಪ್ಪನ್ನು ಸರಿಪಡಿಸಿಕೊಂಡು ಕಾನೂನುಬದ್ಧ ರೀತಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸುರೇಂದ್ರ ಉಗಾರೆ ದೂರಿನಲ್ಲಿ ಆಗ್ರಹಿಸಿದ್ದಾರೆ.