
ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರಿಂದ ಅಂಕಲಗಿಯಲ್ಲಿ ಮತ್ತೊಮ್ಮೆ ಗೂಂಡಾಗಿರಿ; ಆರೋಪಿಗೆ ರಾಜಕೀಯ ರಕ್ಷಣೆ ಇದೆ ಎಂದ ಸತೀಶ ಜಾರಕಿಹೊಳಿ
ಬೆಳಗಾವಿ: ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಅಂಕಲಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಸಚಿವ ರಮೇಶ ಜಾರಕಿಹೊಳಿ ಕಟ್ಟಾ ಶಿಷ್ಯ ರಾಜು ತಳವಾರ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸ್ಥಳೀಯ ಕುಟುಂಬವೊಂದರ ಮೇಲೆ ಮಚ್ಚು, ಕುಡುಗೋಲುಗಳಿಂದ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಘಟನೆ ಕುರಿತಂತೆ ಒಟ್ಟು 26 ಮಂದಿಯ ವಿರುದ್ಧ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 12 ಮಂದಿಯನ್ನು ಬಂಧಿಸಲಾಗಿದೆ. ಆದರೆ ಎಂದಿನಂತೆ ಸಚಿವರ ಶಿಷ್ಯ ಎಂಬ ಕಾರಣಕ್ಕೆ ಪೊಲೀಸರು ಮುಖ್ಯ ಆರೋಪಿ ರಾಜು ತಳವಾರನನ್ನು ಬಂಧಿಸಲಾಗಿಲ್ಲ.
ಕಳೆದ ಮೇ ತಿಂಗಳಲ್ಲಿ ಸಿ.ಆರ್.ಪಿ.ಎಫ್ ಯೋಧನ ಹೆಂಡತಿ ಮತ್ತು ಕುಟುಂಬಸ್ಥರ ಮೇಲೆ ರಾಜು ತಳವಾರ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದರು. ಆಗ 16 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅದರಲ್ಲಿಯೂ ರಾಜು ತಳವಾರ ಮುಖ್ಯ ಆರೋಪಿಯಾಗಿದ್ದಾನೆ. ಆದರೆ ಒತ್ತಡದ ಕಾರಣ ಪೊಲೀಸರು ಆತನನ್ನು ಇದುವರೆಗೆ ಬಂಧಿಸಿಲ್ಲ. ವಿಶೇಷವೆಂದರೆ ಪ್ರಕರಣ ದಾಖಲಿಸಿಕೊಳ್ಳಲೂ ಹಿಂದೇಟು ಹಾಕಿದ್ದ ಪೊಲೀಸರು ನವದೆಹಲಿಯ ಸಿ.ಆರ್.ಪಿ.ಎಫ್ ಕಚೇರಿಯಿಂದ ಒತ್ತಡ ಬಂದ ನಂತರವೇ ಎಫ್ಐಆರ್ ದಾಖಲಿಸಿಕೊಂಡಿದ್ದರು.
ಈಗ ಮತ್ತೊಮ್ಮೆ ರಾಜು ತಳವಾರ ಮತ್ತು ಕುಟುಂಬಸ್ಥರು ಮತ್ತೊಂದು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ. ಮುಖ್ಯ ಆರೋಪಿ ಮತ್ತು ಕುಟುಂಬಸ್ಥರು ಕೈಯಲ್ಲಿ ಕುಡುಗೋಲು ಹಿಡಿದು ಮಾರಾಮಾರಿ ನಡೆಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಂಧಿತರಿಂದ ಅಪಾರ ಪ್ರಮಾಣದ ಹಣವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಹಣದ ಮೂಲವನ್ನೂ ಪೊಲೀಸರು ಪತ್ತೆ ಹಚ್ಚಬೇಕಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಳೆದ 6 ತಿಂಗಳಲ್ಲಿ ಅಂಕಲಗಿಯಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ. ಹೀಗಾಗಿ ಅಂಕಲಗಿಯಲ್ಲಿ ಭಯದ ವಾತಾವರಣ ಇದೆ. ಆರೋಪಿಗೆ ರಾಜಕೀಯ ರಕ್ಷಣೆ ಇದೆ. ಹೀಗಾಗಿ ಪೊಲೀಸರ ಮೇಲೆ ಒತ್ತಡ ಇದೆ. ಆದರೆ ಪೊಲೀಸರ ಭಯ ಇರಲೇ ಬೇಕಾಗುತ್ತದೆ. ಇದೇ ವಿಚಾರಕ್ಕೆ ನಾನು ಹಿಂದೆ ಅಂಕಲಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದೆ. ಪೊಲೀಸರು ಗಂಭೀರ ಕ್ರಮ ಕೈಗೊಳ್ಳಬೇಕು. ದೊಡ್ಡ ಪ್ರಮಾಣದ ಹಣ ದೊರೆತಿದ್ದು, ಆ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು. ಇದನ್ನು ಸರಿ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸತೀಶ ಎಚ್ಚರಿಸಿದರು.