ಅತಿವೃಷ್ಟಿ ಹಾನಿ: ಕಂದಾಯ ಸಚಿವ ಆರ್.ಅಶೋಕ್ ಪರಿಶೀಲನೆ

ಬೆಳಗಾವಿ : ಜಿಲ್ಲೆಯಲ್ಲಿ ಇತ್ತೀಚಿಗೆ ಅತಿವೃಷ್ಟಿಯಿಂದ ಹಾನಿಹೊಳಗಾಗಿರುವ ಬೆಳೆ ಹಾಗೂ ಮನೆಗಳನ್ನು ಕಂದಾಯ ಇಲಾಖೆಯ ಸಚಿವರಾದ ಆರ್.ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ಸಚಿವರು, ಮೊದಲಿಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಭೆ ನಡೆಸಿದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿಯನ್ನು ಪಡೆದುಕೊಂಡ ಸಚಿವರು, ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು. ಜಿಲ್ಲೆಯ ಪ್ರವಾಹದ ಸ್ಥಿಗತಿಯ ಬಗ್ಗೆ ಜನಪ್ರತಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಬಳಿಕ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ‌ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.

ಮೊದಲು ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಹಾಗೂ ಜಿನರಾಳ ಗ್ರಾಮದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿಯನ್ನು ವೀಕ್ಷಿಸಿದರು. ನಂತರ ಹುಕ್ಕೇರಿ ಪಟ್ಟಣದಲ್ಲಿ ಮಳೆಯಿಂದ ಮನೆಗಳು ಹಾಗೂ ಇತರೆ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಅಶೋಕ್ ಅವರು, ಸಂತ್ರಸ್ತರಿಗೆ ಪರಿಹಾರ ನೀಡಲು ಹಣದ ಕೊರತೆಯಿಲ್ಲ; ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಹಣವಿದೆ ಎಂದರು.

ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಪರಿಹಾರ ಕಡಿಮೆ ಬರುವುದರಿಂದ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಹೆಚ್ಚಿನ ನೆರವು ನೀಡಲು ಪ್ರಯತ್ನಿಸಲಾಗುವುದು. ಮೂಲಸೌಕರ್ಯಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಂಡಿದ್ದು, ಸಮರೋಪಾದಿಯಲ್ಲಿ ಪರಿಹಾರ ಕೆಲಸ ಮಾಡುವ ಮೂಲಕ ಸಂತ್ರಸ್ತರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಬಾಕಿ ಉಳಿದಿರುವ ಬೆಳೆ ಪರಿಹಾರ ಹಾಗೂ ಮನೆ ನಿರ್ಮಾಣದ ಕಂತಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಅಶೋಕ್ ಹೇಳಿದರು.

ಬೆಳಗಾವಿಯಲ್ಲಿ ಸುಸಜ್ಜಿತ ಕಾಳಜಿ ಕೇಂದ್ರ ಸ್ಥಾಪನೆ:

ಪ್ರವಾಹ ಮತ್ತಿತರ ತುರ್ತು ಸಂದರ್ಭಗಳಲ್ಲಿ ಜನರಿಗೆ ಸುರಕ್ಷಿತ ನೆಲೆ ಒದಗಿಸುವುದಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಸುಸಜ್ಜಿತ ಪರಿಹಾರ(ಕಾಳಜಿ) ಕೇಂದ್ರ ಸ್ಥಾಪನೆಗೆ ಕ್ರಮ‌ಕೈಗೊಳ್ಳಲಾಗುವುದು. ಈ ಕೇಂದ್ರದಲ್ಲಿ ಅಡುಗೆ ಕೋಣೆ, ಸ್ನಾನಗೃಹಗಳು, ವಸತಿ ಕೋಣೆಗಳನ್ನು ನಿರ್ಮಿಸಲಾಗುವುದು. ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಜನರ ಪುನರ್ವಸತಿಗೆ ಅನುಕೂಲ ಆಗಲಿದೆ ಎಂದು ಸಚಿವ ಆರ್.ಅಶೋಕ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಉಮೇಶ್ ಕತ್ತಿ, ದುರ್ಯೋಧನ ಐಹೊಳೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page