ಪತ್ರಕರ್ತರಿಗೆ ವಿಮಾ‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯ ಮಾಡಲು‌ ನಿರ್ಧಾರ

ಬೆಳಗಾವಿ : ಸದಾಕಾಲ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಬೆಳಗಾವಿ ಪತ್ರಕರ್ತರ ಸಂಘವನ್ನು ಮತ್ತಷ್ಟು ಬಲಿಪಡಿಸುವ ಕಾರ್ಯವಾಗಬೇಕಿದೆ. ಆದ್ದರಿಂದ ಅದಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ಇನ್ನಿತರ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಭವನದಲ್ಲಿ ಮಂಗಳವಾರ ನಡೆದ ಬೆಳಗಾವಿ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಪತ್ರಕರ್ತರ ಕಾರ್ಯವೂ ಸದಾಕಾಲವೂ ಸಮಾಜದ ಏಳಿಗೆ ಹಾಗೂ ಜನರ ಮಧ್ಯೆಯೇ ಮಾಡುವಂತದ್ದಾಗಿದೆ. ಆದರೆ ದೇಶದಾದ್ಯಂತ ಮಹಾಮಾರಿ ಕೊರೊನಾದಿಂದ ಅನೇಕ ಜನರು ಹಾಗೂ ಪತ್ರಕರ್ತರು ಬಾದಿತರಾಗಿದ್ದಾರೆ. ಅಲ್ಲದೇ ಕೆಲವರು ಬಲಿಯಾಗಿದ್ದಾರೆ.  ಆದ್ದರಿಂದ ಕೊರೊನಾಗೆ ಬಾಧಿತವಾಗಿರುವ ಹಾಗೂ ಬಲಿಯಾಗಿರುವ ಪತ್ರಕರ್ತರ ಆಸ್ಪತ್ರೆ ವೆಚ್ಚ ಹಾಗೂ ಕನಿಷ್ಠ ೩೦ ಲಕ್ಷ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ತೀರ್ಮಾನಿಸಲಾಯಿತು. 

ಅಲ್ಲದೇ ಮೊದಲ ಹಂತದಲ್ಲಿ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ, ಉಪಸಂಪಾದಕರಿಗೆ, ಛಾಯಾಗ್ರಾಹಕರಿಗೆ ಆದ್ಯತೆ ನೀಡಲಾಗಿತ್ತು. ಇದೀಗ ಜಿಲ್ಲೆಯಾದ್ಯಂತ ಸಂಘದ ಕಾರ್ಯಚಟುವಟಿಕೆಯನ್ನು ವಿಸ್ತರಿಸಿ, ತಾಲೂಕಾ ಮಟ್ಟದ ಘಟಕವನ್ನು ಸ್ಥಾಪಿಸುವುದು ಹಾಗೂ ಸಂಘದ ಸದಸ್ಯತ್ವವನ್ನು ಮಾಡಿಕೊಳ್ಳುವುದು ಹಾಗೂ ಪತ್ರಿವರ್ಷ ಅತ್ಯುತ್ತಮ ಪತ್ರಕರ್ತ ಹಾಗೂ ಛಾಯಾಗ್ರಾಹಕರನ್ನು ಗುರುತಿಸಿ ಗೌರವಿಸಿ ಪ್ರೊತ್ಸಾಹಿಸುವ ಬಗ್ಗೆ ನಿರ್ಧರಿಸಲಾಯಿತು. ಇದಕ್ಕೂ ಮೊದಲು ೨೦೧೯-೨೦ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಸಂಘದ ಖರ್ಚು ವೆಚ್ಚಗಳ ವರದಿ ವಾಚಿಸಲಾಯಿತು. 

ಇದೇ ವೇಳೆ,  ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ, ಮಹಾನಗರ ಪಾಲಿಕೆಯ ಕನ್ನಡದ ಮೊದಲ ಮೇಯರ್ ಡಾ. ಸಿದ್ದನಗೌಡ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎ.ಜಿ.ಮುಳವಾಡಮಠ, ಕನ್ನಡಹೋರಾಟಗಾರ ಶಶಿಧರ ಘೀವಾರಿ, ಮಾಜಿ ಶಾಸಕ ಬಿ.ಐ. ಪಾಟೀಲ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು. 

ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ ಸಭೆಯ ಅಧ್ಯಕ್ಷತೆವಹಿಸಿದ್ದರು. ಈ ಸಭೆಯಲ್ಲಿ  ಉಪಾಧ್ಯಕ್ಷ ಮಹೇಶ ವಿಜಾಪೂರ, ಕೋಶಾಧ್ಯಕ್ಷ ರಾಯಣ್ಣ. ಆರ್.ಸಿ, ಕಾರ್ಯಾಧ್ಯಕ್ಷರಾದ ಕುಂತಿನಾಥ ಕಲಮನಿ, ಮಲ್ಲಿಕಾರ್ಜುನ ಮುಗಳಿ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಖಜಾಂಚಿಗಳಾದ ಮಂಜುನಾಥ ಕೋಳಿಗುಡ್ಡ, ಭರಮಗೌಡ ಪಾಟೀಲ, ಕಾನೂನು ಸಲಹೆಗಾರ ಹಿರಿಯ ವಕೀಲ ರವೀಂದ್ರ ತೋಟಗೇರ, ಆಡಳಿತ ಮಂಡಳಿ ಸದಸ್ಯರಾದ ಕೀರ್ತಿ ಕಾಸರಗೂಡು,  ರಾಜಶೇಖರ ಹಿರೇಮಠ, ಹೀರಾ ಕಂಗ್ರಾಳ, ಅಶೋಕ ಮುದ್ದಣ್ಣವರ, ಸದಸ್ಯರಾದ ಗೋಪಾಲ ಖಟಾವಕರ, ಅಶೋಕ ಮಗದುಮ್ಮ, ಮಾಲತೇಶ ಮಟಿಗೇರ, ವಿಠ್ಠಲ ಬಾಳೇಕುಂದ್ರಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page