ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಗೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಸಿದ್ಧತೆಗಳು ಆರಂಭಗೊಂಡಿವೆ. ಪಾಲಿಕೆಯ ಅವಧಿಯು ಮಾರ್ಚ್ 9, 2019 ರಂದೇ ಕೊನೆಗೊಂಡಿದ್ದು, ವಾರ್ಡ್ ವಿಂಗಡಣೆ ಮತ್ತು ಮೀಸಲು ಅಧಿಸೂಚನೆ ಕುರಿತ ವಿವಾದಗಳು ನ್ಯಾಯಾಲಯದ ಎದುರು ಇದ್ದಿದ್ದರಿಂದ ಚುನಾವಣೆ ಮುಂದೂಡುತ್ತ ಬಂದಿದೆ.
ಪಾಲಿಕೆಯ ವಾರ್ಡ್ ಮರುವಿಂಗಡಣೆ, ಮೀಸಲು ಅಧಿಸೂಚನೆ, ಮತದಾರರ ಪಟ್ಟಿ ಮತ್ತು ವೇಳಾಪಟ್ಟಿ ಪ್ರಕಟಿಸಿದ 45 ದಿನಗಳ ಒಳಗೆ ಚುನಾವಣೆ ಸಡೆಸಬೇಕು ಎಂದು ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಆದರೆ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಅಧಿಸೂಚನೆ ಹೊರಡಿಸಲು ಎಷ್ಟು ಕಾಲ ಬೇಕು ಎನ್ನುವುದನ್ನು ಕಾದು ನೋಡಬೇಕಾಗಿದೆ. ನ್ಯಾಯಾಲಯದ ಆದೇಶದಿಂದ ಚುನಾವಣೆಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಕಾಂಗ್ರೆಸ್ ಪಕ್ಷದ ಚಿಹ್ನೆಯ ಅಡಿಯಲ್ಲಿಯೇ ಈ ಬಾರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ವತಿಯಿಂದ ಈ ಮೊದಲೇ ಈ ಕುರಿತಂತೆ ಘೋಷಣೆ ಮಾಡಲಾಗಿದ್ದು, ಬಿಜೆಪಿಯೂ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಕೂಡ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿದೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ಮೊದಲಿನಿಂದಲೂ ಭಾಷಿಕರ ಆಧಾರದ ಮೇಲೆ ಚುನಾವಣೆಗಳು ನಡೆದುಕೊಂಡು ಬಂದಿವೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಕನ್ನಡಪರ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯುತ್ತಿದ್ದವು. ಈ ಸಲದಿಂದ ಚಿತ್ರಣ ಬದಲಾಗುವ ಲಕ್ಷಣಗಳು ಕಾಣಲಿವೆ. ಎಂಇಎಸ್ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ರಾಜಕೀಯ ಪಕ್ಷಗಳು ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದನ್ನು ಕನ್ನಡ ಹೋರಾಟಗಾರ ಅಶೋಕ ಚಂದರಗಿ ವಿರೋಧಿಸಿದ್ದಾರೆ.