ದಿ.ಸುರೇಶ ಅಂಗಡಿ ಪ್ರತಿಮೆ ಅನಾವರಣ ಕಾರ್ಯಕ್ರಮ; ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಪ್ರಭಾಕರ ಕೋರೆ, ಪ್ರಕಾಶ ಹುಕ್ಕೇರಿ

ದಿ.ಸುರೇಶ ಅಂಗಡಿ ಪ್ರತಿಮೆ ಅನಾವರಣ ಕಾರ್ಯಕ್ರಮ; ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಪ್ರಭಾಕರ ಕೋರೆ, ಪ್ರಕಾಶ ಹುಕ್ಕೇರಿ

 

 

ಬೆಳಗಾವಿ: ಇಲ್ಲಿಯ ಸಾವಗಾಂವ ರಸ್ತೆಯಲ್ಲಿರುವ ಅಂಗಡಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಗಿರುವ ದಿ.ಸುರೇಶ ಅಂಗಡಿ ಅವರು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬದ್ಧ ರಾಜಕೀಯ ವೈರಿಗಳಾದ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

 

 

ಕಳೆದ ಮೂರು ದಶಕಗಳಿಂದ ರಾಜಕೀಯವಾಗಿ ಪೈಪೋಟಿ ನಡೆಸುತ್ತಲೇ ಬಂದಿರುವ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಒಬ್ಬರ ಪಕ್ಕದಲ್ಲಿ ಇನ್ನೊಬ್ಬರು ನಿಂತುಕೊಂಡು ದಿವಂಗತ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.

 

ಮಂಗಲಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ತಾನು ಅವರ ವಿರುದ್ಧ ಸ್ಪರ್ಧಿಸದೆ ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಅವರು ಲೋಕಸಭೆ ಉಪ-ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಕಾಂಗ್ರೆಸ್ ಸತೀಶ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಪ್ರಚಾರದಿಂದ ಪ್ರಕಾಶ ಹುಕ್ಕೇರಿ ದೂರ ಉಳಿದಿದ್ದರು. ಅಂಗಡಿ ಕುಟುಂಬದೊಂದಿಗಿನ ವೈಯಕ್ತಿಕ ಸಂಬಂಧದ ಕಾರಣಕ್ಕೆ ಪ್ರಕಾಶ ಹುಕ್ಕೇರಿ ಅವರು ಎಲ್ಲ ಬಿಜೆಪಿ ನಾಯಕರೇ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

ದಿ.ಸುರೇಶ ಅಂಗಡಿ ಅವರ ಪ್ರಥಮ ಪುಣ್ಯಸ್ಮರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುತ್ಥಳಿ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಉಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಸಂಸದೆ ಮಂಗಲಾ ಅಂಗಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.