ಅಥಣಿಯಲ್ಲಿ ಸಿಕ್ಕ ಎರಡು ವರ್ಷದ ಬಾಲಕಿ ಗುರುತು ಪತ್ತೆಗೆ ಪೊಲೀಸರ ಹರಸಾಹಸ; ವಾಮಾಚರಕ್ಕೆ ಬಳಕೆಯಾದ ಶಂಕೆ

ಅಥಣಿಯಲ್ಲಿ ಸಿಕ್ಕ ಎರಡು ವರ್ಷದ ಬಾಲಕಿ ಗುರುತು ಪತ್ತೆಗೆ ಪೊಲೀಸರ ಹರಸಾಹಸ; ವಾಮಾಚರಕ್ಕೆ ಬಳಕೆಯಾದ ಶಂಕೆ

 

 

ಬೆಳಗಾವಿ: ಸಪ್ಟೆಂಬರ್ ೨೩ ರಂದು ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ದೊರೆತ ಎರಡು ವರ್ಷ ವಯಸ್ಸಿನ ಬಾಲಕಿಯ ಗುರುತು ಪತ್ತೆಗೆ ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ. ಆರೋಪಿಗಳು ಬಾಲಕಿಯ ಗುಪ್ತಾಂಗ ಸೇರಿದಂತೆ ಎದೆ, ಬೆನ್ನು, ಕುತ್ತಿಗೆ, ಗದ್ದ ಹಾಗೂ ತಲೆ ಭಾಗವನ್ನು ಸಿಗರೇಟು ಮತ್ತು ಗೇರುಬೀಜದಿಂದ ಕ್ರೂರವಾಗಿ ಸುಟ್ಟಿರುವುದರಿಂದ ಬಾಲಕಿಯನ್ನು ವಾಮಾಚಾರಕ್ಕೆ ಬಳಸಲಾಗಿತ್ತಾ ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ.

 

 

ಅಥಣಿ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಬಾಲಕಿಯ ಗುರುತು ಪತ್ತೆಗೆ ಯತ್ನ ನಡೆಸಲಾಗುತ್ತಿದ್ದು, ಪ್ರಕರಣದ ಕುರಿತಂತೆ ಪೊಲೀಸರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ಲ್ಯೂ ಸಿಕ್ಕಿಲ್ಲ. ಬಾಲಕಿಯ ಚಿತ್ರವನ್ನು ಪಕ್ಕದ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ಪೊಲೀಸರಿಗೂ ಕಳಿಸಿಕೊಡಲಾಗಿದ್ದು, ಬಾಲಕಿ ಅಪಹರಣ ಅಥವಾ ಕಾಣೆಯಾದ ಪ್ರಕರಣವೇನಾದರೂ ದಾಖಲಾಗಿದೆಯಾ ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಐದು ದಿನಗಳಾದರೂ ಎಲ್ಲಿಂದಲೂ ಬಾಲಕಿ ಕಾಣೆಯಾಗಿರುವ ಅಥವಾ ಅಪಹರಣಕ್ಕೆ ಒಳಗಾಗಿರುವ ದೂರು ದಾಖಲು ಆಗದೇ ಇರುವುದರಿಂದ ಪ್ರಕರಣದ ಹಿಂದೆ ಪೋಷಕರೇ ಇದ್ದಿರಬಹುದಾದ ಬಗ್ಗೆಯೂ ಪೊಲೀಸರಿಂದ ಅನುಮಾನ ವ್ಯಕ್ತಪಡಿಸುತ್ತಿದೆ.

 

ಇದೇ ಬಾಲಕಿಗೆ ಹೋಲುವಂತಿರುವ ಮಗುವೊಂದನ್ನು ತಂದೆಯೊಬ್ಬ ಕ್ರೂರವಾಗಿ ವಯರ್ ನಿಂದ ಹೊಡೆಯುತ್ತಿರುವ ವಿಡಿಯೋ ಒಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಂದೆಯು ಮಗುವನ್ನು ಆ ಪರಿ ಹೊಡೆಯುವಾಗ ಪಕ್ಕದಲ್ಲಿಯೇ ಕುಳಿತ ತಾಯಿ ನಗುತ್ತಿರುತ್ತಾಳೆ. ಎಲ್ಲಿ ಆ ಮಗು ಇದೇನಾ ಎನ್ನುವ ಅನುಮಾನವೂ ಪೊಲೀಸರಿಗೆ ಬಂದಿದ್ದು, ಆ ವಿಡಿಯೋ ಮತ್ತು ಹಲ್ಯಾಳ ಗ್ರಾಮದಲ್ಲಿ ಸಿಕ್ಕಿರುವ ಬಾಲಕಿಯ ಚಿತ್ರವನ್ನು ಪರೀಕ್ಷೆಗಾಗಿ ಬೆಂಗಳೂರಿನ ಎಫ್.ಎಸ್.ಎಲ್ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ಅದರ ವರದಿ ಇನ್ನೂ ಬರಬೇಕಿದೆ.

 

 

ಮುದ್ದು ಬಾಲಕಿಯ ಮೈಮೇಲಿನ ಚರ್ಮವನ್ನು ಅಮಾನುಷವಾಗಿ ಸುಟ್ಟು ಹಲ್ಯಾಳ ಗ್ರಾಮದಲ್ಲಿನ ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಲಾಗಿತ್ತು. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಅಥಣಿ ಠಾಣೆಯಲ್ಲಿ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಗುವನ್ನು ಗೇರು ಬೀಜದಿಂದಲೂ ಸುಟ್ಟಿರುವುದರಿಂದ ಪೊಲೀಸರಿಗೆ ವಾಮಾಚಾರದ ಶಂಕೆ ಕಾಡುತ್ತಿದೆ.