ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಡುವ ಊಟವಾದರೂ ಎಷ್ಟು? ಚರ್ಚೆ ಹುಟ್ಟು ಹಾಕಿದ ಕರ್ನಾಟಕ ನೀರಾವರಿ ನಿಗಮದ ಆದೇಶ ಪತ್ರ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಡುವ ಊಟವಾದರೂ ಎಷ್ಟು? ಚರ್ಚೆ ಹುಟ್ಟು ಹಾಕಿದ ಕರ್ನಾಟಕ ನೀರಾವರಿ ನಿಗಮದ ಆದೇಶ ಪತ್ರ

 

 

ಬೆಳಗಾವಿ: ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಅಥವಾ ಇಲಾಖೆಗಳಿಗೆ ಸಂಬಂಧಿಸಿದ ಇತರೆ ಮಹತ್ವದ ವಿಷಯಗಳಿಗೆ ಸಂಬಂಧಪಟ್ಟಂತೆ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಅಧಿಕೃತವಾಗಿ ಆದೇಶವನ್ನು ಹೊರಡಿಸುವುದು ವಾಡಿಕೆ. ಆದರೆ ಕರ್ನಾಟಕ ನೀರಾವರಿ ನಿಗಮದ ಜಿಆರ್ ಬಿಸಿಸಿ ವೃತ್ತ, ಹಿಡಕಲ್ ಡ್ಯಾಮ್ ಇದರ ಅಧೀಕ್ಷಕ ಅಭಿಯಂತರ ಆರ್.ಬಿ.ದಾಮನ್ನವರ ಅವರು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಸೂಚಿಸಿ ಹಿಡಕಲ್ ಡ್ಯಾಮ್ ನ ಕಾರ್ಯನಿರ್ವಾಹಕ ಅಭಿಯಂತರರಿಗೆ ಅಧಿಕೃತ ಆದೇಶ ನೀಡಿದ್ದಾರೆ. ಈ ಆದೇಶ ಈಗ ವಿವಿಧ ಇಲಾಖೆಗಳ ಅಧಿಕಾರಿಗಳ ಮಟ್ಟದಲ್ಲಿ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

 

ಜಲಸಂಪನ್ಮೂಲ ಸಚಿವರೂ ಆಗಿರುವ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಅವರು ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಮಾಡುತ್ತಾರೆ. ಆ ಸಮಯದಲ್ಲಿ ಸಚಿವರ ಊಟ ಮತ್ತು ವಸತಿಯ ಉಸ್ತುವಾರಿಯನ್ನು ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರು ನೋಡಿಕೊಳ್ಳಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೆ ಸಚಿವರ ಊಟ ಮತ್ತು ಉಪಚಾರದ ವಿಷಯದಲ್ಲಿ ಯಾವುದೇ ವ್ಯತ್ಯಯ ಅಥವಾ ಲೋಪ ಉಂಟಾದಲ್ಲಿ ಉಸ್ತುವಾರಿ ವಹಿಸಿರುವ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎನ್ನುವ ಎಚ್ಚರಿಕೆಯನ್ನೂ ದಾಮನ್ನವರ ಅವರು ಆದೇಶಪತ್ರದ ಮೂಲಕವೇ ನೀಡಿದ್ದಾರೆ. ಇದೊಂದೇ ಸಲ ಅಲ್ಲ, ಪ್ರತಿ ಬಾರಿ ಸಚಿವರು ಬೆಳಗಾವಿ ಭೇಟಿ ನೀಡಿದಾಗಲೂ ಅದೇ ಇಬ್ಬರು ಅಧಿಕಾರಿಗಳು ಸಚಿವರ ಊಟ ಮತ್ತು ವಸತಿ ಉಸ್ತುವಾರಿ ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಅಧೀಕ್ಷಕ ಅಭಿಯಂತರ ದಾಮನ್ನವರ ಶನಿವಾರ (ಆಗಷ್ಟ 14) ರಂದು ಹೊರಡಿಸಿರುವ ಆದೇಶ ಸಂಖ್ಯೆ ಜಿ.ಆರ್.ಸಿ/ ಬಿ.ಜೆ.ಎಸ್/ಇ.ಎಸ್.ಡಿ/2021-22 ರಲ್ಲಿ ಜಲಸಂಪನ್ಮೂಲ ಇಲಾಖೆಯ ಆಪ್ತ ಕಾರ್ಯದರ್ಶಿಗಳು ಶುಕ್ರವಾರ (ಆಗಷ್ಟ 13) ದಂದು ನಿಗಮಕ್ಕೆ ಬರೆದಿರುವ ಪತ್ರವನ್ನು ಉಲ್ಲೇಖಿಸಲಾಗಿದೆ.

 

ಕೇವಲ ಸಚಿವರ ಊಟ ಮತ್ತು ಉಪಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಆದೇಶವನ್ನೇ ಹೊರಡಿಸಿರುವ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಇದುವರೆಗೆ ಯಾವ ಅಧಿಕಾರಿಯೂ ಮಾಡದ ಕೆಲಸವನ್ನು ಮಾಡಿದ್ದಾರೆ! ಅಲ್ಲದೆ, ಆದೇಶದ ಪ್ರತಿಯನ್ನು ಜಲಸಂಪನ್ಮೂಲ ಇಲಾಖೆಯ ಆಪ್ತ ಕಾರ್ಯದರ್ಶಿ, ವಿಧಾನಸೌಧ ಬೆಂಗಳೂರು, ನಿಗಮದ ಮುಖ್ಯ ಅಭಿಯಂತರರು (ಉತ್ತರ ವಲಯ ಬೆಳಗಾವಿ) ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಿಬಿಸಿ ಉಪವಿಭಾಗ ನಂ. 1 ಮತ್ತು 2 ಹಾಗೂ ಜಿ.ಆರ್.ಬಿಸಿಸಿ ಉಪವಿಭಾಗ ನಂ.1 ಹಾಗೂ 13 ಹಿಡಕಲ್ ಡ್ಯಾಂ ಅವರಿಗೂ ಕಳುಹಿಸಿದ್ದಾರೆ. ಸಚಿವರ ಊಟ ಮತ್ತು ಉಪಚಾರದ ಬಗ್ಗೆ ಇಷ್ಟೆಲ್ಲ ಕಾಳಜಿ ವಹಿಸಿರುವ ಅಧೀಕ್ಷಕ ಅಭಿಯಂತರ ದಾಮನ್ನವರ ಸಚಿವರ ಊಟದ ವೆಚ್ಚವನ್ನು ಇಲಾಖೆಯಿಂದ ಭರಿಸಬೇಕೋ ಅಥವಾ ಅಧಿಕಾರಿಗಳು ತಮ್ಮ ಸಂಬಳದಿಂದ ವೆಚ್ಚ ಮಾಡಬೇಕೋ ಎನ್ನುವುದನ್ನು ಆದೇಶದಲ್ಲಿ ಸ್ಪಷ್ಟಪಡಿಸಿಲ್ಲ.

 

ಸಚಿವರ ಊಟಕ್ಕೆ ಇಲಾಖೆಯ ಹಣವನ್ನು ವೆಚ್ಚ ಮಾಡುವಂತಿಲ್ಲ. ಏಕೆಂದರೆ ಸಚಿವರ ಊಟ, ವಸತಿ ಮತ್ತು ಪ್ರಯಾಣದ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಹಾಗೊಂದು ವೇಳೆ ವೆಚ್ಚ ಮಾಡಿದರೆ ಅದು ನಿಯಮಬಾಹಿರವಾಗುತ್ತದೆ, ಏಕೆಂದರೆ ಒಂದೇ ಉದ್ದೇಶಕ್ಕೆ ಎರಡು ಇಲಾಖೆಗಳ ಹಣವನ್ನು ಖರ್ಚು ಮಾಡುವಂತಿಲ್ಲ. ಹಾಗಾದರೆ ಅಧಿಕಾರಿಗಳು ತಮ್ಮ ಸಂಬಳದ ಹಣವನ್ನು ಸಚಿವರ ಊಟಕ್ಕಾಗಿ ವೆಚ್ಚ ಮಾಡಬೇಕೇ ಎನ್ನುವ ಪ್ರಶ್ನೆ ಏಳುತ್ತದೆ. ಹಾಗೆ ಮಾಡಿದಲ್ಲಿ ಅದೂ ಕೂಡ ಕಾನೂನುಬಾಹಿರವಾಗುತ್ತದೆ. ಆದರೆ ಇಲ್ಲಿ ಅಧಿಕಾರಿಗಳೇ ಸಚಿವರ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳಬೇಕೆಂದು ಇಲಾಖೆಯಿಂದಲೇ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಇದನ್ನು ಸರ್ಕಾರ ಮತ್ತು ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

 

ಇದೆಲ್ಲದರ ನಡುವೆ, ಸಚಿವರ ಊಟಕ್ಕೆ ಸಂಬಂಧಪಟ್ಟಂತೆಯೇ ಒಂದು ಸರ್ಕಾರಿ ಆದೇಶ ಹೊರಬಿದ್ದಿರುವಾಗ, ಸಚಿವ ಗೋವಿಂದ ಕಾರಜೋಳ ಮಾಡುವ ಊಟದ ಪ್ರಮಾಣವಾದರೂ ಎಷ್ಟು? ಅದರ ಮೊತ್ತ ಎಷ್ಟಾಗಬಹುದೆಂಬ ಜಿಜ್ಞಾಸೆ ಈಗ ಎಲ್ಲರನ್ನೂ ಕಾಡುತ್ತಿದೆ. ಎಲ್ಲರಿಗೂ ಗೊತ್ತಿದ್ದಂತೆ ಸಚಿವರ ಖಾಸಗಿ ವೆಚ್ಚವನ್ನು ಆಯಾ ಇಲಾಖೆಯ ಅಧಿಕಾರಿಗಳು ಬಹುತೇಕ ಸಂದರ್ಭಗಳಲ್ಲಿ ಅನಧಿಕೃತವಾಗಿ ತಾವೇ ಭರಿಸುತ್ತಾರೆ. ಈ ಬಗ್ಗೆ ಇಲಾಖೆ ಮುಖ್ಯಸ್ಥರಿಂದ ಅವರಿಗೆ ಮೌಖಿಕವಾಗಿ ತಿಳಿಸಲಾಗಿರುತ್ತದೆ. ಆದರೆ, ಪರಿಸ್ಥಿತಿ ಈಗ ಎಷ್ಟು ಹದಗೆಟ್ಟಿದೆ ಎಂದರೆ ಅದನ್ನು ಈಗ ಸರ್ಕಾರಿ ಆದೇಶಗಳಲ್ಲಿ ನೋಡಬೇಕಾಗಿದೆ.

 

ಗೋಕಾಕಿನ ಸಮಾಜಸೇವಕ ಹಾಗೂ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಅವರ ಪ್ರಕಾರ ಇಂತಹ ವಿಷಯದಲ್ಲಿ ಆದೇಶವನ್ನು ಹೊರಡಿಸುವುದು ಕಾನೂನುಬಾಹಿರವಾಗುತ್ತದೆ. ಏಕೆಂದರೆ ಸಚಿವರ ಊಟ, ವಸತಿ ಮತ್ತು ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಹೀಗಿರುವಾಗ ಅಧಿಕಾರಿಗಳ ಹಣದಲ್ಲಿ ಊಟ ಮಾಡಬೇಕಾದ ಅವಶ್ಯಕತೆ ಸಚಿವರಿಗೆ ಇರುವುದಿಲ್ಲ. ಅತೀ ಅಗತ್ಯ ಎನಿಸಿದಲ್ಲಿ ಸಚಿವರು ಅಧಿಕಾರಿಗಳಿಗೆ ವಿನಂತಿ ಮಾಡಿಕೊಳ್ಳಬಹುದು. ಆದರೆ ಅಧಿಕಾರಿಗಳು ಆ ಹಣವನ್ನು ತಮ್ಮ ಸ್ವಂತ ಜೇಬಿನಿಂದ ನೀಡುವಂತಿಲ್ಲ. ಅದನ್ನು ಸಚಿವರೇ ಪಾವತಿ ಮಾಡಬೇಕು. ಅಷ್ಟಕ್ಕೂ ಸಚಿವರೊಬ್ಬರ ಊಟದ ವ್ಯವಸ್ಥೆಗೂ ಸಂಬಂಧಪಟ್ಟಂತೆ ಇಲಾಖೆಯಿಂದ ಆದೇಶವನ್ನು ಹೊರಡಿಸುವ ಅಗತ್ಯ ಇದೆಯೇ ಎಂದು ಅವರು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ಪ್ರಶ್ನಿಸಿದ್ದಾರೆ.