ಬೆಳಗಾವಿಯಲ್ಲಿನ ನೇಪಾಳಿ ಕಾರ್ಮಿಕರ ಅಳಲು ಕೇಳಿಸಿಕೊಳ್ಳುವವರು ಯಾರು? ನೇಪಾಳ ಕರೆಯುತ್ತಿಲ್ಲ, ಭಾರತ ಕಳಿಸುತ್ತಿಲ್ಲ

ಬೆಳಗಾವಿ: ಕೇಂದ್ರ ಸರ್ಕಾರ ಇತ್ತೀಚಿಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ವಲಸೆ ಕಾರ್ಮಿಕರಿಗೆ ನಿಯಮಗಳಲ್ಲಿ ಸಡಿಲಿಕೆ ಮಾಡಿ, ತಮ್ಮ ಮೂಲ ಸ್ಥಾನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಹೊರದೇಶದಲ್ಲಿ ಸಿಲುಕಿರುವ ಜನರನ್ನೂ ಏರ್ ಲಿಫ್ಟ್ ಮಾಡಿ ಕರೆತರಲಾಗುತ್ತಿದೆ. ಆದರೆ, ಬೆಳಗಾವಿಯಲ್ಲಿ ಇರುವ ನೇಪಾಳ ಮೂಲದ 151 ಕಾರ್ಮಿಕರಿಗೆ ಸರ್ಕಾರದ ಯಾವ ಮಾರ್ಗಸೂಚಿಗಳು ಅನ್ವಯವಾಗದೆ, ಅವರ ಗೋಳು ಕೇಳತೀರದಾಗಿದೆ.

ಈ ನೇಪಾಳ ಮೂಲಕ ಕಾರ್ಮಿಕರು ಬೆಳಗಾವಿಯ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವರು ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಹೊಟೇಲ್ ಗಳು ಬಂದ್  ಆಗಿವೆ. ಇನ್ನು ಯಾವಾಗ ಆರಂಭವಾಗುತ್ತವೆ ಗೊತ್ತಿಲ್ಲ. ಆರಂಭವಾದರೂ ಕೊರೊನಾ ವೈರಸ್ ಭೀತಿಯಿಂದಾಗಿ ಮೊದಲಿನಂತೆ ಜನರು ಹೊಟೇಲ್ ಗಳಿಗೆ ಬರುವ ಬಗ್ಗೆ ಅನುಮಾನವಿದೆ. ಹೊಟೇಲ್ ಮಾಲಿಕರು ಅರ್ಧಕ್ಕರ್ಧ ನೌಕರರನ್ನು ಕಡಿಮೆ ಮಾಡುತ್ತಿದ್ದಾರೆ. ಸರ್ಕಾರದ ವತಿಯಿಂದಲೂ ಹೊಟೇಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯದ ಘೋಷಣೆ ಮಾಡಿಲ್ಲ. ಇದರಿಂದಾಗಿ ಈ ಕಾರ್ಮಿಕರ ಬದುಕು ನರಕವಾಗಿದ್ದು, ಮರಳಿ ತಮ್ಮ ದೇಶಕ್ಕೆ ಹೋದರೆ ಸಾಕು ಎನ್ನುತ್ತಿದ್ದಾರೆ.

ಭಾರತ ಮತ್ತು ನೇಪಾಳ ನಡುವೆ ಉತ್ತಮ ಸಂಬಂಧವಿದ್ದು, ಎರಡೂ ದೇಶಗಳ ನಡುವೆ ಸಂಚರಿಸಲು ವೀಸಾ ಅಗತ್ಯವಿಲ್ಲ. ಹೀಗಾಗಿ ಇಲ್ಲಿಯ ಕಾರ್ಮಿಕರು ಅಲ್ಲಿ, ಅಲ್ಲಿಯ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಬೆಳಗಾವಿಯಲ್ಲಿ ಇರುವ ಕಾರ್ಮಿಕರು ಈಗಾಗಲೇ ಜಿಲ್ಲಾಡಳಿತವನ್ನು ಭೇಟಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಈ ಕುರಿತು ಜಿಲ್ಲಾಡಳಿತದ ಬಳಿ ಯಾವುದೇ ರೀತಿಯ ಮಾರ್ಗಸೂಚಿಗಳು ಇಲ್ಲ.

ಹಿರಿಯ ಅಧಿಕಾರಿಗಳ ಪ್ರಕಾರ ಹೊರದೇಶದ ಕಾರ್ಮಿಕರನ್ನು ಅವರ ದೇಶಗಳಿಗೆ ಕಳಿಸುವುದು ಭಾರತ ಸರ್ಕಾರದ ಜವಾಬ್ದಾರಿಯಲ್ಲ. ಭಾರತ ಬೇರೆ ದೇಶದಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆತರುತ್ತಿರುವಂತೆ, ನೇಪಾಳ ಸರ್ಕಾರ ಇಲ್ಲಿಂದ ತಮ್ಮ ಜನರನ್ನು ಕರೆದುಕೊಂಡು ಹೋಗಬಹುದು. ಅದಕ್ಕಾಗಿ ನೇಪಾಳಿ ಕಾರ್ಮಿಕರು ಅಲ್ಲಿನ ಸರ್ಕಾರವನ್ನು ಸಂಪರ್ಕಿಸಬೇಕು. ಆದರೆ, ಈ ಕಾರ್ಮಿಕರ ಬಳಿ ಅಲ್ಲಿನ ಸರ್ಕಾರವನ್ನು ಹೇಗೆ ಸಂಪರ್ಕಿಸಬೇಕು ಮತ್ತು ನೆರವನ್ನು ಹೇಗೆ ಕೇಳಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಕೆಲವು ಕಾರ್ಮಿಕರ ಪರಿಸ್ಥಿತಿಯಂತೂ ಇನ್ನಷ್ಟು ಜಟಿಲವಾಗಿದೆ. ಕೆಲವರು ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದು ೨೦-೨೫ ವರ್ಷಗಳಾಗಿವೆ. ಮೂಲ ಮನೆ ನೇಪಾಳದಲ್ಲಿದ್ದರೆ ಇಲ್ಲಿ ಬಾಡಿಗೆ ಮಾಡಿಕೊಂಡು ಇದ್ದಾರೆ. ಆಗಾಗ ನೇಪಾಳಕ್ಕೆ ಹೋಗಿ ಬರುತ್ತಾರೆ. ಕೆಲವರು ಮಕ್ಕಳು ನೇಪಾಳದಲ್ಲಿ ಕಲಿಯುತ್ತಿದ್ದರೆ, ಇನ್ನು ಕೆಲವರ ಮಕ್ಕಳು ಇಲ್ಲಿಯೇ ಕಲಿಯುತ್ತಿದ್ದಾರೆ. ಬಂದು ಬಹಳ ವರ್ಷಗಳು ಆಗಿರುವುದರಿಂದ ಅವರು ಇಲ್ಲಿಯೇ ಆಧಾರ ಕಾರ್ಡ್, ಓಟರ್ ಐಡಿ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಮತವನ್ನೂ ಚಲಾಯಿಸುತ್ತಾರೆ. ಕೆಲವೊಂದಿಷ್ಟು ಮಂದಿ ಎರಡೂ ದೇಶಗಳ ಓಟರ್ ಐಡಿ ಹೊಂದಿದ್ದಾರೆ.

“ನಾನು 12 ವರ್ಷದವನು ಇದ್ದಾಗಿನಿಂದ ಬೆಳಗಾವಿಯಲ್ಲಿ ಇದ್ದೇನೆ. ಹೊಟೇಲ್ ನಲ್ಲಿ ಕೆಲಸ ಮಾಡುತ್ತೇನೆ. ನನ್ನ ಐದು ಮಕ್ಕಳಲ್ಲಿ ನಾಲ್ಕು ಮಂದಿ ನೇಪಾಳದಲ್ಲಿ ಕಲಿಯುತ್ತಿದ್ದರೆ, ಒಬ್ಬರು ಬೆಳಗಾವಿಯಲ್ಲಿ. ಈಗ ಕೆಲಸ ಇಲ್ಲದ ಕಾರಣ, ನಾವು ನಮ್ಮ ದೇಶಕ್ಕೆ ಹೋಗಬಯಸುತ್ತೇವೆ. ಬೆಳಗಾವಿಯ ಜಿಲ್ಲೆಯ ಅಧಿಕಾರಿಗಳಿಗೆ ನಮ್ಮ ಪಟ್ಟಿಯನ್ನು ಕಳಿಸಿ ಕೊಟ್ಟಿದ್ದೇವೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಇಲ್ಲಿಯ ಸರ್ಕಾರ ನಮ್ಮನ್ನು ನೇಪಾಳಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು. ಪರಿಸ್ಥಿತಿ ಸರಿಹೋದ ಮೇಲೆ ನಾವು ವಾಪಸ್ ಬರುತ್ತೇವೆ”  ಎಂದು ಮೋಹನ ಸಿಂಗ್ ಎನ್ನುವ ನೇಪಾಳಿ ಕಾರ್ಮಿಕ ‘ಟುಡೇ ಬ್ರೇಕಿಂಗ್ಸ್’ ಗೆ ಹೇಳಿದರು.

Leave a Reply

Your email address will not be published. Required fields are marked *

You cannot copy content of this page