ಬೆಳಗಾವಿ: ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಘಟಾನುಘಟಿಗಳ ಹೆಸರುಗಳು ಮುಂಚೂಣಿಗೆ ಬಂದಿದ್ದು, ಟಿಕೆಟ್ ನಿರ್ಧಾರ ಮಾಡುವುದು ಪಕ್ಷಕ್ಕೆ ಮತ್ತಷ್ಟು ಕಷ್ಟಕರವಾಗಿದೆ.
ಪಕ್ಷವು ಈ ಬಾರಿ ರಾಜ್ಯಸಭೆಗೆ ಕಳಿಸುವುದನ್ನು ಕೈಬಿಟ್ಟ ಬಳಿಕ, ಪ್ರಭಾಕರ ಕೋರೆ ಅವರು ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಕೋರೆ ಅವರ ಬೆಂಗಲಿಗರಾಗಿರುವ ಮಹಾಂತೇಶ ಕವಟಗಿಮಠ ಅವರು, ಕೊರೆಯವರಿಗೆ ಬೆಳಗಾವಿ ಲೋಕಸಭೆಯ ಟಿಕೆಟ್ ನೀಡುವಂತೆ ಪಕ್ಷವನ್ನು ಒತ್ತಾಯಿಸಿದ್ದಾರೆ.
ಹೊಸ ಬೆಳವಣಿಗೆಯಲ್ಲಿ ಸಚಿವ ಜಗದೀಶ ಶೆಟ್ಟರ್ ಅವರ ಹೆಸರೂ ಕೂಡ ಬೆಳಗಾವಿ ಲೋಕಸಭೆ ಚುನಾವಣೆಗೆ ತಳುಕು ಹಾಕಿಕೊಳ್ಳತೊಡಗಿದೆ. ಮೇಲ್ನೋಟಕ್ಕೆ ಈ ಸುದ್ದಿಯಲ್ಲಿ ಕಡಿಮೆ ಸತ್ಯಾಂಶ ಇದೆ ಎನಿಸಿದರೂ, ಬಿಜೆಪಿ ಆಂತರಿಕ ವಲಯದಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸುರೇಶ ಅಂಗಡಿ ಅವರ ಮನೆಯಿಂದ ಯಾರಿಗಾದರೂ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಹಲವು ಬಿಜೆಪಿ ಮುಖಂಡರದ್ದು. ಅದರಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರೂ ಇದೇ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಕುಟುಂಬಸ್ಥರ ಎಲ್ಲ ಹೆಸರುಗಳನ್ನು ಹಿಂದೆ ಹಾಕಿ, ಅಂಗಡಿ ಬೀಗರು ಎನ್ನುವ ಕಾರಣಕ್ಕೆ ಧಿಡೀರನೆ ಈಗ ಶೆಟ್ಟರ್ ಹೆಸರು ಮುಂಚೂಣಿಗೆ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಶೆಟ್ಟರ್ ಹೆಸರು ತೇಲಿ ಬಿಡುವ ಹಿಂದೆ ರಾಜಕೀಯ ಕೈವಾಡವಿರುವ ಶಂಕೆಯೂ ಇದೆ.
ಇವನ್ನು ಬಿಟ್ಟರೆ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ ಹೀಗೆ ಅನೇಕ ಪ್ರಭಾವಿಗಳ ಹೆಸರುಗಳೂ ಚಾಲ್ತಿಯಲ್ಲಿವೆ. ಒಂದೆಡೆ ಬಿಜೆಪಿಯಲ್ಲಿ ಟಿಕೆಟ್ ಪಡೆಯಲು ಘಟಾನುಘಟಿಗಳು ಪೈಪೋಟಿಗೆ ಬಿದ್ದಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ಪಕ್ಷದ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.