
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಬಿ.ವೈ.ವಿಜಯೇಂದ್ರ ಹೆಸರು ಪ್ರಸ್ತಾಪ?
ಬೆಳಗಾವಿ: ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ವಲಯದಲ್ಲಿ ಹೊಸ ಹೊಸ ಹೆಸರುಗಳು ಪ್ರಸ್ತಾಪವಾಗುತ್ತಲೇ ಬರುತ್ತಿವೆ. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸರದಿ.
ಇಂದು ಮುಖ್ಯಮಂತ್ರಿ ಜೊತೆ ನವದೆಹಲಿಯಲ್ಲಿ ಸುದೀರ್ಘ ಮಾತುಕತೆ ಮಾತುಕತೆ ನಡೆಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಯಡಿಯೂರಪ್ಪನವರ ಮುಂದೆ ಈ ಪ್ರಸ್ತಾವವನ್ನು ಇಟ್ಟಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ ಶಾ ಮತ್ತು ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಪಟ್ಟಂತೆ ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ಬೆಳಗಾವಿಯಿಂದ ಗೆಲ್ಲಿಸಿಕೊಂಡು ಬಂದು ಕೇಂದ್ರದಲ್ಲಿ ಒಳ್ಳೆಯ ಹುದ್ದೆ ನೀಡುವುದು ಮತ್ತು ಯಡಿಯೂರಪ್ಪನವರಿಗೂ ಉತ್ತಮ ಸ್ಥಾನಮಾನದ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆದರೆ ಯಡಿಯೂರಪ್ಪನವರ ಜೊತೆ ಮಾತನಾಡಿರುವ ಯಡಿಯೂರಪ್ಪ ಈ ಚರ್ಚೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಮುಂದಿನ ವಾರ ಅಮಿತ ಶಾ ಅವರು ರಾಜ್ಯಕ್ಕೆ ಮತ್ತು ವಿಶೇಷವಾಗಿ ಬೆಳಗಾವಿಗೆ ಭೇಟಿ ನೀಡುತ್ತಿರುವ ಇದೇ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ, ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಪ್ರತಿಷ್ಠೆಯ ಕಣವಾಗುತ್ತಿರುವಂತೆ ತೋರುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪ್ರಮುಖ ಪಕ್ಷಗಳಿಂದ ಘಟಾನುಘಟಿಗಳ ಹೆಸರುಗಳು ಪ್ರಸ್ತಾಪವಾಗುತ್ತಿವೆ.