20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಂದ ಚನ್ನಮ್ಮ ವೃತ್ತದಲ್ಲಿ ಭಾರೀ ಪ್ರತಿಭಟನೆ!

ಬೆಳಗಾವಿ: ವಿವಿಧ ರೈತಪರ ಸಂಘಟನೆಗಳು ಇಂದು ನೀಡಿದ್ದ ‘ಭಾರತ ಬಂದ್’ ಕರೆಗೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಹಲವಾರು ಬಿಜೆಪಿಯೇತರ ರಾಜಕೀಯ ಪಕ್ಷಗಳು ಇಂದು ಬೆಂಬಲ ವ್ಯಕ್ತಪಡಿಸಿ, ಅಲ್ಲಲ್ಲಿ ಪ್ರತಿಭಟನೆ ನಡೆಸಿದವು.

ವಿಶೇಷವಾಗಿ ಬೆಳಗಾವಿಯಲ್ಲಿ 20ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ಸಮೂಹ ಅತ್ಯಂತ ಹುಮ್ಮಸ್ಸಿನಿಂದ ಪ್ರತಿಭಟನೆಯಲ್ಲಿ ಭಾಗವಹಿಸಿತು! ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭಗೊಂಡ ಕಾರ್ಯಕರ್ತರ ಬೃಹತ್ ರ್ಯಾಲಿ, ಚನ್ನಮ್ಮ ವೃತ್ತದ ವರೆಗೆ ಪಾದಯಾತ್ರೆ ನಡೆಸಿ ಭಾರೀ ಸಮಾವೇಶದಲ್ಲಿ ಮಾರ್ಪಾಡಾಯಿತು!

ಕಾಂಗ್ರೆಸ್ ಜಿಲ್ಲಾ (ಗ್ರಾಮೀಣ) ಅಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ನಡೆದ ಈ ರ್ಯಾಲಿ ಮತ್ತು ಪ್ರತಿಭಟನೆಯಲ್ಲಿ ಹಾಲಿ-ಮಾಜಿ ಶಾಸಕರು, ಸಂಸದರು ಅಥವಾ ಪ್ರಮುಖ ಮುಖಂಡರಾರೂ ಭಾಗವಹಿಸಿರಲಿಲ್ಲ. ಆದರೂ 20ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದರು! ಈ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಜೀವಂತ ಇದೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಅವರು ಯಶಸ್ವಿಯಾದರು!

ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬರಲಿದ್ದಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ, ಕಾಂಗ್ರೆಸ್ ಮಾತ್ರ ೨೦ ಜನರನ್ನು ಕಳಿಸಿ ‘ನಮ್ಮ ಒಬ್ಬೊಬ್ಬ ಕಾರ್ಯಕರ್ತನನ್ನು ಸಾವಿರ ಕಾರ್ಯಕರ್ತರಿಗೆ ಸಮ ಎಂದು ತಿಳಿದುಕೊಳ್ಳಿ’ ಎಂದು ಅಸಹಾಯಕತೆಯಿಂದ ಹೇಳಿದಂತಿತ್ತು ಅಲ್ಲಿನ ದೃಶ್ಯ.

ಏನೇ ಆಗಲಿ, ಜನರ ಮನಸ್ಸು ಗೆಲ್ಲಲು ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಬಿಜೆಪಿಯಿಂದ ಕಲಿಯಬೇಕು ಮತ್ತು ಅದನ್ನು ಹೇಗೆ ಕಳೆದುಕೊಳ್ಳಬಹುದು ಎನ್ನುವುದನ್ನು ಕಾಂಗ್ರೆಸ್ ನೋಡಿ ಕಲಿಯಬಹುದು.

Leave a Reply

Your email address will not be published. Required fields are marked *

You cannot copy content of this page