ಡಿಸಿಸಿ ಬ್ಯಾಂಕ್ ಚುನಾವಣೆ: ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಸೋಲು

ಬೆಳಗಾವಿ: ಇಲ್ಲಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಖಾನಾಪುರ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಪರಾಭವಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕಿಗೆ ಪ್ರಥಮ ಮಹಿಳಾ ನಿರ್ದೇಶಕಿಯಾಗುವ ಮೂಲಕ ಇತಿಹಾಸ ಬರೆಯುವ ಅವಕಾಶ ಕಳೆದುಕೊಂಡಿದ್ದಾರೆ.

ನಿಂಬಾಳ್ಕರ್ ಅವರು ಒಟ್ಟು 25 ಮತಗಳನ್ನು ಪಡೆದಿದ್ದು, ಅವರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಶಾಸಕ ಅರವಿಂದ ಪಾಟೀಲ 27 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ನಾಯಕರು ಅರವಿಂದ ಪಾಟೀಲ ಅವರಿಗೆ ಬೆಂಬಲ ಘೋಷಿಸಿದ ಬಳಿಕ, ನಿಂಬಾಳ್ಕರ್ ಅವರು ತಮ್ಮ ಬೆಂಬಲಿಗ ಮತದಾರರನ್ನು ಮಹಾರಾಷ್ಟ್ರದ ರೆಸಾರ್ಟ್ ಗೆ ಕರೆದೊಯ್ದಿದ್ದರು.

ನಿಂಬಾಳ್ಕರ್ ಅವರ ಬಳಿ ಗೆಲುವಿಗೆ ಅಗತ್ಯ ಮತಗಳು ಇವೆ ಎಂದೇ ಹೇಳಲಾಗಿತ್ತು. ಆದರೂ ಅವರಿಗೆ ಸೋಲು ಉಂಟಾಗಿರುವುದು ಆಶ್ಚರ್ಯ ತಂದಿದೆ. ಚುನಾವಣೆಗೆ ಎರಡು ಗಂಟೆ ಮುಂಚೆ ಶಾಸಕಿ ನಿಂಬಾಳ್ಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಜಾರಕಿಹೊಳಿ ಅವರು ನಿಂಬಾಳ್ಕರ್ ಮನವೊಲಿಸುವಲ್ಲಿ ಯಶಸ್ವಿಯಾದರು ಎನ್ನಲಾಗುತ್ತಿದೆ.

ಡಿಸಿಸಿ ಬ್ಯಾಂಕಿನ ಒಟ್ಟು 16 ಕ್ಷೇತ್ರಗಳ ಪೈಕಿ, 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಈ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು. ಉಳಿದ ಮೂರು ಕ್ಷೇತ್ರಗಳಿಗೆ ಇಂದು ನಗರದ ಬಿಕೆ ಮಾಡೆಲ್ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಿತು. ಉಳಿದಂತೆ  ರಾಮದುರ್ಗ ತಾಲೂಕಾ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಶ್ರೀಕಾಂತ ಢವಣ ಮತ್ತು ನೇಕಾರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಕೃಷ್ಣಾ ಅನಗೋಳ್ಕರ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page