ಕಿರಣ ಠಾಕೂರ ಅಂಗಡಿ ಮುಚ್ಚಿಸಿದ ಅಭಯ ಪಾಟೀಲ!

ಕಿರಣ ಠಾಕೂರ ಅಂಗಡಿ ಮುಚ್ಚಿಸಿದ ಅಭಯ ಪಾಟೀಲ!

 

 

 

ಬೆಳಗಾವಿ: ಭಾಷೆ ಮತ್ತು ಗಡಿವಿವಾದವನ್ನು ಬಂಡವಾಳ ಮಾಡಿಕೊಂಡು ಮುಗ್ಧ ಮರಾಠಿಗರನ್ನು ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಪ್ರಚೋದಿಸುವ ಅಂಗಡಿ ತೆರೆದು ಲಾಭ ಮಾಡಿಕೊಳ್ಳುತ್ತಿದ್ದ ಕಿರಣ ಠಾಕೂರ ಅಂಗಡಿಯನ್ನು ಶಾಸಕ ಅಭಯ ಪಾಟೀಲ ಮುಚ್ಚಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಮರಾಠಿ ಮತದಾರರು ತಮಗೆ ಗಡಿ ಮತ್ತು ಭಾಷೆಯ ಭಾವನಾತ್ಮಕ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

 

 

ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಮರಾಠಿಗರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಭಾಷೆಯ ರಾಜಕಾರಣಕ್ಕೆ ತೀಲಾಂಜಲಿ ಇಟ್ಟಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಹೀಗಾಗಿ ಇದೇ ವಿವಾದವನ್ನು ಬಿಜಿನೆಸ್ ಮಾಡಿಕೊಂಡು ಅಂಗಡಿ ತೆರೆದಿದ್ದವರಿಗೆಲ್ಲ ತಕ್ಕ ಪಾಠ ಕಲಿಸಿದ್ದಾರೆ. ಪ್ರತಿ ಬಾರಿ ಪಾಲಿಕೆ ಚುನಾವಣೆಗಿಂತ ಮೂರ್ನಾಲ್ಕು ತಿಂಗಳು ಮೊದಲಿನಿಂದಲೇ ‘ತರುಣ ಭಾರತ’ ಪತ್ರಿಕೆಯ ಮೂಲಕ ಮರಾಠಿ ಭಾಷಿಕರನ್ನು ಪ್ರಚೋದಿಸುವ ಕೆಲಸ ಆರಂಭವಾಗುತ್ತಿತ್ತು. ಗಡಿ ಹೋರಾಟದಲ್ಲಿ ಮಡಿದವರ ಫೋಟೋಗಳನ್ನು ಪ್ರಕಟಿಸಿ, ಅವರ ಬಲಿದಾನ ವ್ಯರ್ಥ ಹೋಗಬಾರದು ಎಂದು ಮರಾಠಿಗರ ಆತ್ಮಸಾಕ್ಷಿಯನ್ನು ಕೆಣಕುವ ಕೆಲಸ ಮಾಡಲಾಗುತ್ತಿತ್ತು. ಈ ಬಾರಿಯೂ ಸ್ಪಲ್ಪ ಮಟ್ಟಿಗೆ ಅಂತಹ ಪ್ರಯತ್ನಗಳು ನಡೆದವಾದರೂ ಸೂಜ್ಞ ಮರಾಠಿ ಮತದಾರರು ಅದಕ್ಕೆಲ್ಲ ಸೊಪ್ಪು ಹಾಕಿಲ್ಲ.

 

 

ಇಲ್ಲಿಯವರೆಗೆ ಕನ್ನಡ – ಮರಾಠಿ ಗುಂಪುಗಳ ನಡುವೆ ಒಂದು ಗುಂಪಿನ ಅಭ್ಯರ್ಥಿಯನ್ನು ಮರಾಠಿಗರಿಗೆ ಆಯ್ಕೆ ಮಾಡಬೇಕಾಗಿತ್ತು. ಹೀಗಾಗಿ ಅವರು ಅನಿವಾರ್ಯವಾಗಿ ಎಂಇಎಸ್ ಅಭ್ಯರ್ಥಿಗೇ ಓಟು ಚಲಾಯಿಸುತ್ತಿದ್ದರು. ಈ ಬಾರಿ ರಾಷ್ಟ್ರೀಯ ಪಕ್ಷಗಳ ರೂಪದಲ್ಲಿ ಪರ್ಯಾಯ ದೊರಕಿದ್ದರಿಂದ ಮರಾಠಿ ಭಾಷಿಕರು ಆ ಕಡೆ ವಾಲಿದ್ದು, ಎಂಇಎಸ್ ನಾಯಕರ ಸ್ವಾರ್ಥಕ್ಕೆ ತಾವಿನ್ನು ಬಲಿಯಾಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆ.

 

 

ಕಿರಣ ಠಾಕೂರ ಬಗ್ಗೆ ಮರಾಠಿ ಭಾಷಿಕರು ಹೆಚ್ಚು ಬೇಸರ ಇಟ್ಟುಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಇಎಸ್ ಮುಖವಾಣಿ ಎಂದು ‘ತರುಣ ಭಾರತ’ ಪತ್ರಿಕೆಯನ್ನು ಬಿಂಬಿಸಿಕೊಂಡು ಅದರಿಂದ ಹೆಚ್ಚಿನ ಲಾಭ ಮಾಡಿಕೊಂಡವರು ಕಿರಣ ಠಾಕೂರ. ಎಂಇಎಸ್ ಸಂಘಟನೆಯಲ್ಲಿಯೇ ಗುಂಪುಗಾರಿಕೆ ಸೃಷ್ಟಿಸಿ ತಮಗೆ ಬೇಕಾದವರಿಗೆ ಹೆಚ್ಚಿನ ಪ್ರಚಾರ ಕೊಡುತ್ತ, ಬೇಡವಾದವರನ್ನು ಟಾರ್ಗೆಟ್ ಮಾಡುವ ಮೂಲಕ ಮೂಲೆಗುಂಪು ಮಾಡುವ ಕೆಲಸವನ್ನು ಅದೇ ಪತ್ರಿಕೆಯ ಮೂಲಕ ಮಾಡಿದ್ದು ಗುಟ್ಟಾದ ಸಂಗತಿ ಏನೂ ಅಲ್ಲ. ಎಂಇಎಸ್ ನಲ್ಲಿ ಗುಂಪುಗಾರಿಕೆ ನಡೆದು, ಸಂಘಟನೆಗೆ ಈಗಿನ ದಾರುಣ ಸ್ಥಿತಿ ಬರಲಿಕ್ಕೂ ಕೂಡ ಕಿರಣ ಠಾಕೂರ ಅವರೇ ಕಾರಣ ಎಂದು ಎಂಇಎಸ್ ಮುಖಂಡರೇ ಈಗ ಬಾಯಿಬಿಟ್ಟು ಹೇಳುತ್ತಿದ್ದಾರೆ. ಕಿರಣ ಠಾಕೂರ ಅವರು ತೆರೆದಿದ್ದ ಭಾಷಾ ವೈಷಮ್ಯ ಭಿತ್ತುವ ಅಂಗಡಿಗೆ ಶಾಸಕ ಅಭಯ ಪಾಟೀಲ ಈಗ ಬೀಗ ಜಡಿದಿದ್ದಾರೆ.

 

 

 

ಠಾಕೂರ- ಪಾಟೀಲ ನಡುವೆ ಹಾವು-ಮುಂಗುಸಿ ದ್ವೇಷ”

 

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಕಿರಣ ಠಾಕೂರ ನಡುವೆ ಹಲವು ವರ್ಷಗಳ ದ್ವೇಷವಿರುವುದು ಬೆಳಗಾವಿಗರಿಗೆ ಗೊತ್ತಿರುವ ವಿಷಯ. ಇಬ್ಬರೂ ತಮ್ಮ ದ್ವೇಷವನ್ನು ಚೆನ್ನಾಗಿಯೇ ನಿಭಾಯಿಸಿಕೊಂಡು ಬಂದಿದ್ದಾರೆ. ‘ತರುಣ ಭಾರತ’ ಪತ್ರಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದಕ್ಕಾಗಿ ಅಭಯ ಪಾಟೀಲ ಠಾಕೂರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾವಣೆ ಮಂಡಿಸುವ ಮೂಲಕ, ಠಾಕೂರ ಅವರು ಸದನಕ್ಕೆ ಬಂದು ಕ್ಷಮೆ ಕೇಳುವಂತೆ ಮಾಡಿದ್ದರು. ಲೋಕಮಾನ್ಯ ಸೊಸೈಟಿಯಲ್ಲಿಯೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಅದರ ವಿರುದ್ಧ ಸಮರ ಸಾರಿದ್ದಾರೆ. ಆ ಬಗ್ಗೆ ತನಿಖೆ ಮುಂದುವರಿದಿದೆ.

 

 

ಹಾಗಂತ ಕಿರಣ ಠಾಕೂರ ಸುಮ್ಮನೆ ಕೂತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಅಭಯ ಪಾಟೀಲ ಟಿಕೆಟ್ ತಪ್ಪಿಸಲು ಶಕ್ತಿಮೀರಿ ಪ್ರಯತ್ನ ಮಾಡಿದ್ದರು. ಬಿಜೆಪಿ ಟಿಕೆಟ್ ಪಡೆಯಲು ಅಭಯ ಬೆಂಗಳೂರಿನಲ್ಲಿ ತಳವೂರಿ ಕಸರತ್ತು ನಡೆಸುತ್ತಿರುವಾಗ, ಠಾಕೂರ ದೆಹಲಿಯಲ್ಲಿ ಕೂತು ಬಿಜೆಪಿ ಹಿರಿಯ ನಾಯಕರೊಬ್ಬರ ಮೂಲಕ ಅವರ ಟಿಕೆಟ್ ತಪ್ಪಿಸಲು ಶಕ್ತಿಮೀರಿ ಯತ್ನಿಸುತ್ತಿದ್ದರು. ಎಲ್ಲ ಕ್ಷೇತ್ರಗಳ ಟಿಕೆಟ್ ಅಂತಿಮಗೊಂಡರೂ ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಕೆಟ್ ಫೈನಲ್ ಆಗಿರಲಿಲ್ಲ. ಸ್ವಲ್ಪ ಯಾಮಾರಿದ್ದರೂ ಟಿಕೆಟ್ ಅಭಯ ಪಾಟೀಲ ಕೈತಪ್ಪುತ್ತಿತ್ತು. ಅಂತಹ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ಠಾಕೂರ ಕುತಂತ್ರವನ್ನು ರಾಜ್ಯದ ವರಿಷ್ಠರಿಗೆ ತಿಳಿಹೇಳುವ ಮೂಲಕ ಅತ್ಯಂತ ಕೊನೆಯ ಹಂತದಲ್ಲಿ ಅಭಯ ಪಾಟೀಲ ಟಿಕೆಟ್ ಗಿಟ್ಟಿಸಿಕೊಂಡಿದ್ದರು.

 

 

ಅಂದೇ ಅವರು ಕಿರಣ ಠಾಕೂರ ಅವರ ಅಂಗಡಿ ಬಂದ್ ಮಾಡುವ ನಿರ್ಧಾರ ತಳೆದಿದ್ದರು. ಅವರ ಅಂಗಡಿ ಬಂದ್ ಆಗಬೇಕಾದರೆ ಎಂಇಎಸ್ ಅನ್ನು ಬೇರು ಸಮೇತ ಕಿತ್ತು ಎಸೆಯಬೇಕು ಎನ್ನುವುದು ಅವರಿಗೆ ಗೊತ್ತಿತ್ತು. ಹೀಗಾಗಿ ಸರಿಯಾದ ದಾಳ ಉರುಳಿಸಿ, ರಾಜ್ಯ ಬಿಜೆಪಿ ವರಿಷ್ಠರನ್ನು ಈ ಬಾರಿ ಪಕ್ಷದ ಚಿನ್ನೆಯ ಅಡಿಯಲ್ಲಿ ಪಾಲಿಕೆ ಚುನಾವಣೆ ಎದುರಿಸಲು ಮನವೊಲಿಸಿದ್ದರು. ಚುನಾವಣೆ ಗೆಲ್ಲಲು ಕಳೆದ ಕೆಲವು ತಿಂಗಳಿಂದ ಕಾರ್ಯತಂತ್ರ ಹೆಣೆದಿದ್ದರು. ಅಭಯ ಪಾಟೀಲ ಅಂದುಕೊಂಡಂತೆ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ನಾಮಶೇಷವಾಗಿದ್ದು, ಈ ಮೂಲಕ ಕಿರಣ ಠಾಕೂರ ಅಂಗಡಿಯೂ ಮುಚ್ಚಿದಂತಾಗಿದೆ.