ಮರಾಠಿ ಪ್ರೇಮ ಮೆರೆದ ಸಚಿವ ಶ್ರೀಮಂತ ಪಾಟೀಲ; ಕೋವಿಡ್ ಮಾರ್ಗಸೂಚಿಗೂ ಡೋಂಟ್ ಕೇರ್

ಬೆಳಗಾವಿ: ಅಥಣಿ ತಾಲೂಕಿನ ಬಳೆಗೇರಿಯಲ್ಲಿ ಇಂದು ನಡೆದ ಶ್ರೀ ಬಸವೇಶ್ವರ ಶುಗರ್ಸ್ ನೂತನ ಸಕ್ಕರೆ ಕಾರ್ಖಾನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ ಅವರು ಮರಾಠಿಯಲ್ಲಿಯೇ ಮಾತನಾಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಕನ್ನಡಿಗರು ಆಕ್ರೋಶಗೊಳ್ಳಲು ಇನ್ನೊಂದು ಕಾರಣವೆಂದರೆ, ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯುತ್ತಿದ್ದರೂ ಅಲ್ಲಿ ಕನ್ನಡಕ್ಕೆ ಯಾವುದೇ ಸ್ಥಾನ ಇರಲಿಲ್ಲ. ಕಾರ್ಯಕ್ರಮ ಸ್ಥಳದಲ್ಲಿನ ಬ್ಯಾನರಿನಲ್ಲಿಯೂ ಸಂಪೂರ್ಣವಾಗಿ ಮರಾಠಿಯೇ ರಾರಾಜಿಸುತ್ತಿತ್ತು. ಅದಕ್ಕೆ ಕಳಶವಿಟ್ಟಂತೆ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿಯೇ ಮಾತನಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಮುಖಂಡರನ್ನು ಖುಷಿಪಡಿಸಿದ್ದಾರೆ.

ಮಹಾರಾಷ್ಟ್ರದ ಸಹಕಾರ ಇಲಾಖೆಯ ರಾಜ್ಯ ಸಚಿವ ವಿಶ್ವಜೀತ ಕದಮ, ಶಾಸಕ ವಿಕ್ರಮಸಿಂಹ ಸಾವಂತ, ವಿಧಾನ ಪರಿಷತ್ ಸದಸ್ಯ ಮೋಹನರಾವ್ ಕದಮ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಕ್ಕರೆ ಕಾರ್ಖಾನೆಯು ಮಹಾರಾಷ್ಟ್ರದ ಉದ್ಯಮಿಯೋರ್ವರಿಗೆ ಸೇರಿದ್ದಾಗಿದ್ದು, ಕರ್ನಾಟಕದ ವತಿಯಿಂದ ಸಚಿವ ಶ್ರೀಮಂತ ಪಾಟೀಲ ಭಾಗವಹಿಸಿದ್ದರು.

ಸಚಿವ ಶ್ರೀಮಂತ ಪಾಟೀಲ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿಗಳು ಮರಾಠಿಯಲ್ಲಿಯೇ ಮಾತನಾಡಿದ್ದು ಕನ್ನಡಿಗರು ಆಕ್ರೋಶಗೊಳ್ಳುವಂತೆ ಮಾಡಿದೆ. ಕಾರ್ಯಕ್ರಮದಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಹುತೇಕರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಸಾಮಾಜಿಕ ಅಂತರವನ್ನೂ ಪಾಲಿಸಲಾಗಿರಲಿಲ್ಲ.

Leave a Reply

Your email address will not be published. Required fields are marked *

You cannot copy content of this page