
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿಗಾಗಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ- ಈಶ್ವರಪ್ಪ
ಬೆಳಗಾವಿ: ರಾಜ್ಯದಲ್ಲಿ ಮರಾಠ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸರ್ಕಾರ ಘೋಷಿಸಿದ ಬೆನ್ನಲ್ಲೇ ಹಲವಾರು ಸಮುದಾಯಗಳು ತಮಗೂ ಪ್ರತ್ಯೇಕ ನಿಗಮ ಅಥವಾ ಪ್ರಾಧಿಕಾರ ಬೇಕು ಎಂದು ಆಗ್ರಹಿಸಿ ಹೋರಾಟಕ್ಕೆ ಅಣಿಯಾಗುತ್ತಿವೆ. ಈ ನಡುವ ಕುರುಬ ಸಮುದಾಯದವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕು ಎನ್ನುವ ಕೂಗು ಪ್ರಬಲವಾಗುತ್ತಿದ್ದು, ದೊಡ್ಡ ಮಟ್ಟದ ಹೋರಾಟಕ್ಕೆ ಸಮುದಾಯ ಸಿದ್ಧತೆ ನಡೆಸಿದೆ. ಇಂದು ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಮುಂದಿನ ತಿಂಗಳು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ತಮ್ಮದೇ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಬೆಳಗಾವಿ ಕಣಬರ್ಗಿ ರಸ್ತೆಯ ಸಂಕಲ್ಪ ಗಾರ್ಡನ್ ನಲ್ಲಿ ಇಂದು ಕುರುಬ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಸಮಾಜದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಕುರುಬ ಸಮುದಾಯದ ಎಸ್ಟಿಗೆ ಸೇರ್ಪಡೆ ಆಗಬೇಕು. ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಲಾಗುವುದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದರು.
ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರಿನ ರವರೆಗೆ ಪಾದಯಾತ್ರೆ, ಅದಕ್ಕೂ ಮೊದಲು ಡಿಸೆಂಬರ್ 28 ರಂದು ಕಾಗಿನೆಲೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಸಮಾಜದ ಎಲ್ಲಾ ಮುಖಂಡರು ಕಾಗಿನೆಲೆಗೆ ಬಂದು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ಮನವಿ ಮಾಡಿಕೊಂಡರು.
ಸಚಿವ ಈಶ್ವರಪ್ಪನವರ ನಡೆಯನ್ನು ಖಂಡಿಸಿ ನಿನ್ನೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಮಾಜದ ಮುಖಂಡ ಅರವಿಂದ ದಳವಾಯಿ, ಈಶ್ವರಪ್ಪನವರು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ತಮ್ಮ ಉದ್ಧಾರಕ್ಕಾಗಿ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮದೇ ಬಿಜೆಪಿ ಪಕ್ಷ ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ಅಧಿಕಾರದಲ್ಲಿ ಇರುವಾಗ ಪ್ರತಿಭಟನೆ ಮಾಡುವ ನಾಟಕವೇಕೆ? ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿಸಿ ಕೇಂದ್ರಕ್ಕೆ ಕಳಿಸಲಿ. ಇದನ್ನು ಬಿಟ್ಟು ಬರೀ ಬಿಜೆಪಿಯವರನ್ನೇ ಕರೆದುಕೊಂಡು ಹೋರಾಟ ಮಾಡುತ್ತೇನೆ ಎನ್ನುವುದು ಬೂಟಾಟಿಕೆಯಾಗುತ್ತದೆ. ಇದಕ್ಕೆ ಸಿದ್ಧರಾಮಯ್ಯ ಕೂಡ ಈ ಬೂಟಾಟಿಕೆಯ ನಡೆಯನ್ನು ಒಪ್ಪಿಕೊಂಡಿಲ್ಲ ಎಂದು ಅರವಿಂದ ದಳವಾಯಿ ಹೇಳಿದ್ದರು.