ಸಪ್ಟೆಂಬರ್ 17 ರಂದು ಬೆಳಗಾವಿ ಜಿಲ್ಲೆಯಾದ್ಯಂತ ಬೃಹತ್ ಲಸಿಕಾಮೇಳ: ಖಾಸಗಿ ಆಸ್ಪತ್ರೆಗಳಲ್ಲಿಯೂ ದೊರೆಯಲಿದೆ ಉಚಿತ ಕೊರೊನಾ ವ್ಯಾಕ್ಸಿನ್

ಸಪ್ಟೆಂಬರ್ 17 ರಂದು ಬೆಳಗಾವಿ ಜಿಲ್ಲೆಯಾದ್ಯಂತ ಬೃಹತ್ ಲಸಿಕಾಮೇಳ: ಖಾಸಗಿ ಆಸ್ಪತ್ರೆಗಳಲ್ಲಿಯೂ ದೊರೆಯಲಿದೆ ಉಚಿತ ಕೊರೊನಾ ವ್ಯಾಕ್ಸಿನ್

 

ಬೆಳಗಾವಿ: ಇದೇ ಶುಕ್ರವಾರ (ಸೆ.17) ಜಿಲ್ಲೆಯಾದ್ಯಂತ ಬೃಹತ್ ಲಸಿಕಾ ಮೇಳ ಆಯೋಜಿಸಲಾಗಿದ್ದು, ಸರಕಾರದಿಂದ ಪೂರೈಸುವ ಲಸಿಕೆಗಳನ್ನು  ನಗರದ ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

 

ಲಸಿಕಾ ಮೇಳದ ಸಿದ್ಧತೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ಸೆ.17 ರಂದು ರಾಜ್ಯದಲ್ಲಿ ಒಟ್ಟಾರೆ 30 ಲಕ್ಷ ಲಸಿಕೆ‌ ನೀಡುವ ಗುರಿ ಹೊಂದಲಾಗಿದೆ.‌ ಅದರಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಲಕ್ಷ ಲಸಿಕೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈ ಗುರಿ ಸಾಧನೆಗೆ ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಕೂಡ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಇನ್ನೂ  ಹತ್ತು ಲಕ್ಷ ಮೊದಲ ಡೋಸ್ ಲಸಿಕೆ ನೀಡುವುದು ಬಾಕಿಯಿದೆ. ಆದ್ದರಿಂದ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ನೀಡಲು ಇದೊಂದು‌ ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.

 

 

ಖಾಸಗಿ ಆಸ್ಪತ್ರೆಗಳಿಗೆ ಉಚಿತ ಲಸಿಕೆ ಪೂರೈಕೆ:

                               

ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಆಯೋಜಿಸುವ ಲಸಿಕಾಮೇಳದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಲಸಿಕೆಗಳನ್ನು ಪೂರೈಸಲಾಗುವುದು. ಖಾಸಗಿ ಆಸ್ಪತ್ರೆಗಳು ನೀಡುವ ಬೇಡಿಕೆಪಟ್ಟಿಯನ್ನು ಆಧರಿಸಿ ಅಗತ್ಯವಿರುವ ಲಸಿಕೆಗಳನ್ನು ಪೂರೈಸಲಾಗುವುದು. ಖಾಸಗಿ ಆಸ್ಪತ್ರೆಗೆ ಆಗಮಿಸುವ ಜನರಿಗೆ ಉಚಿತವಾಗಿ ಲಸಿಕೆಗಳನ್ನು ನೀಡುವ ಮೂಲಕ ಎಲ್ಲರಿಗೂ ಲಸಿಕೆ‌ ನೀಡಬೇಕು ಎಂಬ ಸರಕಾರದ ಆಶಯವನ್ನು ಈಡೇರಿಸಲು ಲಸಿಕಾಕರಣ ಯಶಸ್ವಿಗೆ ಕೈಜೋಡಿಸಬೇಕು. ಉಚಿತ ಲಸಿಕೆ ನೀಡಿದ ಬಳಿಕ ಸರಕಾರದ ಪೋರ್ಟಲ್ ಗೆ  ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಮಾಹಿತಿಯನ್ನು ಅಪಲೋಡ್ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

 

 ಲಸಿಕಾಕರಣಕ್ಕೆ ಅಗತ್ಯವಿರುವ ನರ್ಸ್ ಸಿಬ್ಬಂದಿಯನ್ನು ಕೂಡ ಆಸ್ಪತ್ರೆಗಳು ಒದಗಿಸಬೇಕು. ಕೋವಿಡ್ ಸಂದರ್ಭದಲ್ಲಿ ಅನೇಕ ಆಸ್ಪತ್ರೆಗಳು ಉತ್ತಮ ಕೆಲಸ‌ ಮಾಡಿವೆ. ಈಗ ಲಸಿಕೆ ನೀಡುವ ಮೂಲಕ ಸಾರ್ವಜನಿಕ ಕೆಲಸದಲ್ಲಿ ಕೈಜೋಡಿಸಬೇಕು ಅವರು ಕರೆ ನೀಡಿದರು.

 

ಜಿಲ್ಲಾಡಳಿತ ವತಿಯಿಂದ ಡಾಟಾ ಎಂಟ್ರಿ ಮಾಡುವವರನ್ನು ಒದಗಿಸಿದರೆ ಐದು ನೂರರಿಂದ ಹದಿನೈದು ನೂರು ಲಸಿಕೆ ನೀಡಲು ಸಿದ್ಧವಿರುವುದಾಗಿ ಖಾಸಗಿ ಆಸ್ಪತ್ರೆಗಳ ಪದಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಐ.ಪಿ.ಗಡಾದ ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು, ಆಡಳಿತ ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.