ಮುಂಬಯಿ : ಕೇಂದ್ರ ಸರ್ಕಾರದಿಂದ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮುಂದುವರಿಯುತ್ತಿರುವಾಗ, ಮಹಾರಾಷ್ಟ್ರ ಸರ್ಕಾರ ಪ್ರಮುಖ ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ರಾಜ್ಯದಲ್ಲಿನ ಎಲ್ಲ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಮರಾಠಿ ಬಳಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ತ್ರಿಭಾಷಾ ಸೂತ್ರದ ಅನ್ವಯ ಕೇಂದ್ರದ ಕಚೇರಿಗಳಲ್ಲಿ ಇಂಗ್ಲೀಷ್ ಮತ್ತು ಹಿಂದಿ ಜೊತೆ ಸ್ಥಳೀಯ ಆಡಳಿತ ಭಾಷೆ ಮರಾಠಿಯಲ್ಲಿಯೂ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶವು ಮಹಾರಾಷ್ಟ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಕೇಂದ್ರ ಸರ್ಕಾರದ ಕಚೇರಿಗಳು, ಸಾರ್ವಜನಿಕ ಬ್ಯಾಂಕುಗಳು, ವಿಮಾ ಕಂಪನಿಗಳು, ರೇಲ್ವೆ ಹಾಗೂ ಇತರೆ ಕೇಂದ್ರೀಯ ಸಂಸ್ಥೆಗಳಿಗೆ ಅನ್ವಯ ಆಗಲಿದೆ. ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ನಿರ್ದೇಶನದ ಮೇಲೆ ಹೊರಡಿಸಿರುವ ಈ ಆದೇಶ ಮಹಾರಾಷ್ಟ್ರದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.
ಆದೇಶವನ್ನು ಕಡ್ಡಾಯವಾಗಿ ಕಾರ್ಯಾನ್ವಿತಗೊಳಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಅಧಿಕಾರಿಗಳನ್ನು ನೇಮಿಸುವ ಕಾರ್ಯವನ್ನೂ ಆರಂಭಿಸಲಾಗಿದೆ. ಸಮನ್ವಯ ಅಧಿಕಾರಿಗಳು ಕೇಂದ್ರದ ಕಚೇರಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಲಿದ್ದಾರೆ. ಮರಾಠಿ ಭಾಷೆಯನ್ನು ಅಳವಡಿಸಿಕೊಳ್ಳಲು ಅಗತ್ಯ ಸಹಕಾರ ನೀಡಲಿದ್ದಾರೆ.