ಸುವರ್ಣಸೌಧಕ್ಕೆ ಸ್ಥಳಾಂತರಗೊಳ್ಳಲಿರುವ ನೀರಾವರಿ ನಿಗಮದ ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳಲು ಲಾಬಿ ಆರಂಭ

ಬೆಳಗಾವಿ: ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ 23 ಕಚೇರಿಗಳು ಮತ್ತು ಧಾರವಾಡದಲ್ಲಿನ ಕರ್ನಾಟಕ ನೀರಾವರಿ ನಿಗಮದ ವಿಭಾಗೀಯ ಕಚೇರಿಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಜೂನ್ 30 ರಂದು ಆದೇಶ ನೀಡಿದ್ದರು. ಆದರೆ, ಕೋವಿಡ್ ಮತ್ತು ಇತರೆ ಕಾರಣಗಳ ನೆಪವೊಡ್ಡಿ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಈ ನಡುವೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರಾವರಿ ನಿಗಮದ ಕಚೇರಿಯಲ್ಲಿ ಅಲ್ಲಿಯೇ ಉಳಿಸಿಕೊಳ್ಳಲು ಈಗ ಲಾಬಿ ಆರಂಭವಾಗಿದೆ.

ಈಗಾಗಲೇ ಸುವರ್ಣಸೌಧದಲ್ಲಿ ಅಗತ್ಯ ಪರಿಕರಗಳ ವ್ಯವಸ್ಥೆ ಮಾಡಲು ನೀರಾವರಿ ನಿಗಮದಿಂದ ರೂ. 50 ಲಕ್ಷ ಹಣವನ್ನು ಲೋಕೋಪಯೋಗಿ ಇಲಾಖೆಗೆ ಡಿಪಾಜಿಟ್ ಮಾಡಲಾಗಿದೆ. ಆದರೆ, ಆ ಹಣವನ್ನು ಬಳಸಿಕೊಳ್ಳದಂತೆ ಒತ್ತಡ ತರಲಾಗಿದ್ದು, ಕಚೇರಿಯ ಸ್ಥಳಾಂತರವನ್ನು ಮುಂದೂಡಲಾಗುತ್ತಿದೆ. ಧಾರವಾಡ ಮತ್ತು ಹುಬ್ಬಳ್ಳಿಯ ರಾಜಕೀಯ ನಾಯಕರಿಗೆ ಆ ಜಿಲ್ಲೆಯ ಯಾವುದೇ ಸರ್ಕಾರಿ ಕಚೇರಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ. ಇಲ್ಲಿಯ ನಾಯಕರು ಕಚೇರಿಗಳು ಹೋಗುವುದನ್ನು ಮೊದಲೇ ತಡೆಯುವುದಿಲ್ಲ. ಕಳೆದುಕೊಂಡ ಬಳಿಕ ವಾಪಸ್ ತರುವ ನಾಟಕವಾಡಿ ಬಳಿಕ ಕೈಬಿಡುತ್ತಾರೆ.

ಹಾಗೆ ನೋಡಿದರೆ ಬೆಳಗಾವಿ ಜಿಲ್ಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನದಿಗಳು ಹರಿಯುವುದರಿಂದ ನೀರಾವರಿ ಇಲಾಖೆಗೆ ಸೇರಿದ ಕಚೇರಿಗಳೂ ಇಲ್ಲಿಯೇ ಇರಬೇಕಾಗುತ್ತದೆ. ಆದರೂ ನೀರಾವರಿ ನಿಗಮದ ವಿಭಾಗೀಯ ಕಚೇರಿಯನ್ನು ಧಾರವಾಡಲ್ಲಿ ಇರಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಧಾರವಾಡದಲ್ಲಿನ ನಿಗಮದ ಕಚೇರಿಗೆ ಪ್ರತಿ ತಿಂಗಳು ಅಂದಾಜು 3 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ಈ ಅನವಶ್ಯಕ ವೆಚ್ಚವನ್ನು ಕಡಿತಗೊಳಿಸಲು ಸರ್ಕಾರ ಬಾಡಿಗೆಯಲ್ಲಿ ನಡೆಯುತ್ತಿರುವ ಒಟ್ಟು 24 ಕಚೇರಿಗಳನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸುವ ಆದೇಶ ನೀಡಿತ್ತು. ಆದರೆ ಧಾರವಾಡದ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಕುಮ್ಮಕ್ಕೂ ಇದೆ ಎನ್ನಲಾಗಿದೆ.

ಕಚೇರಿಯನ್ನು ಉಳಿಸಿಕೊಳ್ಳಲು ಈಗಾಗಲೇ ಧಾರವಾಡದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ನೀರಾವರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್ ಅವರು ಆದೇಶವನ್ನು ರದ್ದುಪಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. “ಸರ್ಕಾರ ಮಿತವ್ಯಯದ ದೃಷ್ಟಿಯಿಂದ ಕಚೇರಿಗಳನ್ನು ಭೂತಬಂಗಲೆಯಂತೆ ಆಗಿರುವ ಸುವರ್ಣಸೌಧಕ್ಕೆ ಸ್ಥಳಾಂತರಿಸಿದೆ. ಆದರೆ ಧಾರವಾಡದ ನಾಯಕರು ಅದಕ್ಕೆ ಒಪ್ಪುತ್ತಿಲ್ಲ. ಇತ್ತೀಚಿಗಷ್ಟೇ ಬೆಳಗಾವಿಗೆ ಮಂಜೂರಾಗಿದ್ದ ವೈರಾಲಜಿ ಲ್ಯಾಬರೋಟರಿಯನ್ನು ಬಿಮ್ಸ್ ನಿಂದ ಕಿಮ್ಸ್ ಗೆ ವರ್ಗಾಯಿಸಲಾಯಿತು. ಬೆಳಗಾವಿಯಲ್ಲಿ ಆಗಬೇಕಿದ್ದ ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮವನ್ನೂ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಗೆ ತೆಗೆದುಕೊಂಡು ಹೋದರು. ಈಗ ಸಿಎಂ ಆದೇಶವಾಗಿದ್ದರೂ ನೀರಾವರಿ ನಿಗಮದ ಕಚೇರಿಯನ್ನು ಅಲ್ಲಿಯ ನಾಯಕರು ಬಿಟ್ಟುಕೊಡುತ್ತಿಲ್ಲ. ಧಾರವಾಡದ ನಾಯಕರಿಂದ ಬೆಳಗಾವಿಯ ನಾಯಕರು ಕಲಿಯುವುದು ಸಾಕಷ್ಟಿದೆ” ಎಂದು ಸಮಾಜ ಸೇವಕ ಮಲ್ಲಿಕಾರ್ಜುನ ಚೌಕಶಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page