ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿದ ಭೂಮಾಪಕ ಸಸ್ಪೆಂಡ್

ಬೆಳಗಾವಿ: ಇಲ್ಲಿಯ ಸದಾಶಿವ ನಗರದಲ್ಲಿನ ಜಿಲ್ಲಾಧಿಕಾರಿ ಕಂಪೌಂಡ್ ಆವರಣದಲ್ಲಿನ ಎಂದು ನಮೂದು ಇದ್ದ ಸರ್ಕಾರಿ ಆಸ್ತಿಯನ್ನು, ದಾಖಲೆ ತಿದ್ದುವ ಮೂಲಕ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿರುವ ನಗರ ಭೂಮಾಪಕ ಪ್ರಶಾಂತ ಎನ್ ಕಟ್ಟಿಮನಿ ಅವರನ್ನು ಅಮಾನತು ಮಾಡಿ ಭೂದಾಖಲೆಗಳ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಆಗಿದೆ.

ಮೂಲ ದಾಖಲೆಗಳಲ್ಲಿ ಸಿ.ಸ.ನಂ.4866A/19 ಆಸ್ತಿಯು ರಾಜ್ಯ ಸರ್ಕಾರದ ಹೆಸರಿನಲ್ಲಿದ್ದು, ಸದರಿ ಆಸ್ತಿಯು ಜಿಲ್ಲಾಧಿಕಾರಿಯವರ ಕಾಂಪೌಂಡ್ ಎಂದು ಇತ್ತು. ಅದನ್ನು ಕಾನೂನುಬಾಹಿರವಾಗಿ ತಿದ್ದುಪಡಿ ಮಾಡಿರುವ ಕಟ್ಟಿಮನಿ, ಆಸ್ತಿಯನ್ನು ಸಿ.ಸ.ನಂ 4873A/1 ಕ್ಷೇತ್ರ 1226.0 ಅಂತ ನಮೂದಿಸಿ ಖಾಸಗಿ ವ್ಯಕ್ತಿಗಳಾದ ಶಿವಮೂರ್ತಿ ಚನಬಸಯ್ಯ ದಂಡಿನಮಠ ಮತ್ತು ವಿಶ್ವನಾಥ ಚನಬಸಯ್ಯ ದಂಡಿನಮಠ ಅವರ ಹೆಸರಿಗೆ ದಾಖಲಿಸಿದ್ದಾರೆ. ಈ ಮೂಲಕ ಖಾಸಗಿ ವ್ಯಕ್ತಿಗಳು ಸರ್ಕಾರಿ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಸಹಕರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಟ್ಟಿಮನಿ ಅವರ ಕಾನೂನು ಬಾಹಿರ ಕೃತ್ಯವು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ  ಇಲಾಖೆ, ಬೆಂಗಳೂರು ಇವರಿಗೆ ಸಮಗ್ರವಾದ ವರದಿಯನ್ನು ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಲಾಗಿದ್ದು, ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹಾಗೂ ಈ ರೀತಿಯಲ್ಲಿ ಸರ್ಕಾರಿ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಸಹಕರಿಸುವ, ಸರ್ಕಾರಿ ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಭೂದಾಖಲೆಗಳ ಜಂಟಿ ನಿರ್ದೇಶಕರು, ನಗರ ಮಾಪನ, ಉತ್ತರ ವಲಯ, ಬೆಳಗಾವಿ ಇವರು ತಿಳಿಸಿದ್ದಾರೆ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದ ಪಕ್ಷದಲ್ಲಿ 3 ವರ್ಷ ಕಾರಾಗೃಹವಾಸ ಮತ್ತು ಆರೋಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲೂ ಕೂಡ ಅವಕಾಶ ಇದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page