ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ವೇತನ ಪರಿಷ್ಕರಣೆಗೆ ಅಗತ್ಯ; ಸಚಿವ ಹೆಬ್ಬಾರ

ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ವೇತನ ಪರಿಷ್ಕರಣೆಗೆ ಅಗತ್ಯ; ಸಚಿವ ಹೆಬ್ಬಾರ

 

 

ಬೆಳಗಾವಿ: ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಶೀಘ್ರವೇ‌ ಪರಿಹಾರ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ತಿಳಿಸಿದರು.

 

 

ರಾಜ್ಯದಲ್ಲಿರುವ ಸಕ್ಕರೆ ಉದ್ದಿಮೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆ ಕುರಿತು ಸುವರ್ಣ ಸೌಧದಲ್ಲಿ ಮಂಗಳವಾರ (ಸೆ.28) ನಡೆದ‌ ತ್ರೀಪಕ್ಷೀಯ ವೇತನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಮತ್ತು 2018 ರಲ್ಲಿ ವೇತನ ಹೆಚ್ಚಳದ ಕುರಿತು ಮಾಡಲಾದ ಒಪ್ಪಂದದ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ‌ ನೀಡಿದರು.

 

 

ಮೂಲವೇತನದಲ್ಲಿ ಹೆಚ್ಚಳ : 

 

ಕಾರ್ಮಿಕರಿಗೆ ಕನಿಷ್ಠ ವೇತನದಲ್ಲಿ ಕೆಲಸ‌ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆಯಿಂದಾಗಿ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಯ ಮಂಡಳಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನವನ್ನು ಪರಿಷ್ಕರಿಸುವ ಸಂಬಂಧ ದಕ್ಷಿಣ ಭಾರತದ ಸಕ್ಕರೆ ತಯಾರಕರ ಸಂಘ (ಕರ್ನಾಟಕ), ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಗಳ ಫೆಡರೇಶನ್ ಮತ್ತು ಕರ್ನಾಟಕ ಸಕ್ಕರೆ ಕಾರ್ಮಿಕರ ಫೆಡರೇಶನ್ ನಡುವೆ ಒಪ್ಪಂದವಾಗಿದೆ. ಒಪ್ಪಂದದ ಪ್ರಕಾರ ಕಾರ್ಮಿಕರ ವೇತನವನ್ನು ಪರಿಷ್ಕರಿಸಿ, ಮೂಲ ವೇತನದಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

 

 

ಕಾರ್ಮಿಕರ ಶ್ರೇಣಿಯಲ್ಲಿ ಸುಧಾರಣೆ :

ದಿನಗೂಲಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಾಗುವುದು. 2019 ರಲ್ಲಿ ಅನುಮೋದನೆ ಮಾಡಲಾದ ವೇತನದ ಒಪ್ಪಂದದ ನಿಯಮಾವಳಿಗಳ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

 

 

ಕಾರ್ಮಿಕ ಮಂಡಳಿಯ ನಿರ್ಮಾಣ :

 

ಅತಿ ಶೀಘ್ರಲ್ಲಿಯೇ ಕಾರ್ಮಿಕ ಮಂಡಳಿ ರಚಿಸಿ, ಸಂಬಳ ಹಾಗೂ ರೈತರಿಗೆ ಪಾವತಿಸುವ ಬಿಲ್ಲು ಹಾಗೂ ಇತರ ಮಾಹಿತಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಕ್ಕರೆ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಕಡಿಮೆ‌ ವೇತನ ನೀಡಿ,ಕೆಲಸ ‌ಮಾಡಿಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಅದಕ್ಕಾಗಿ, ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

 

 

ಇದೇ ವೇಳೆ ಮಾತನಾಡಿದ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಭೆಯಲ್ಲಿ ನಡೆದಂಥ ನಡಾವಳಿಗಳ ಕುರಿತು ಸಕ್ಕರೆ ಕಾರ್ಖಾನೆ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ರೈತರು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ನಿಯಮಾನುಸಾರ ಪರಿಹರಿಸಲಾಗುವುದು. ಕಾರ್ಮಿಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

 

 

ಸಭೆಯಲ್ಲಿ ಚರ್ಚಿಸಲಾದ ಸಮಸ್ಯೆಗಳಿಗೆ‌ ಒಂದು ತಿಂಗಳ ಒಳಗಾಗಿ ಪರಿಹಾರ ಒದಗಿಸಲಾಗುವುದು. ಕೋವಿಡ್ -19 ಸಂಕಷ್ಟದ ಸಮಯದಲ್ಲಿ ದೇಶದಾದ್ಯಂತ ಕಾರ್ಮಿಕರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಸಫಲವಾಗಿ ತಲುಪಿಸಲಾಗುತ್ತಿದೆ. ರನ್ನ ಸಕ್ಕರೆ ಕಾರ್ಖಾನೆ ಹಾಗೂ ಇತರೆ ಕಾರ್ಖಾನೆಗಳ ಸಮಸ್ಯೆ ಗಳನ್ನು ಪರಿಹರಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳ ಸಂಪೂರ್ಣ ‌ಸಹಕಾರವಿದೆ ಎಂದು ಅವರು ತಿಳಿಸಿದರು.

 

 

ಸರ್ಕಾರದ ಆದೇಶಗಳಿಗೆ ಮನ್ನಣೆ ನೀಡಿ :

 

ಕಳೆದ ಸಭೆಗಳಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಭಾಗವಹಿಸದಿರುವುದು ವಿಷಾದನೀಯ. ಉತ್ತಮವಾದ ಚರ್ಚೆ ನಡೆಸಿ,ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಭೆಗಳನ್ನು ಕರೆಯಲಾಗುತ್ತದೆ. ಗೈರು ಹಾಜರಾಗುವುದು ಹಾಗೂ ಸರಕಾರದ ಆದೇಶಗಳಿಗೆ ಮನ್ನಣೆ ನೀಡದಿರುವುದು ಅಗೌರವವಾಗುತ್ತದೆ. 2019ರ ಸರಕಾರ ಮತ್ತು ದ್ವಿಪಕ್ಷೀಯ ಒಪ್ಪಂದದ ನಿರ್ಣಯಕ್ಕೆ ಬೆಲೆ ಕೊಡದೆ ಇದ್ದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ತಿಳಿಸಿದರು.

 

 

ವಿವಿಧ ಬೇಡಿಕೆಈಡೇರಿಸುವಂತೆ ಸಚಿವರಿಗೆ ಆಗ್ರಹ

 

ಸಭೆಯಲ್ಲಿ ಕಾರ್ಮಿಕ ಸಿಬ್ಬಂದಿಗಳ ಕೊರತೆ ಇದೆ. ಕಾರ್ಮಿಕರ ಅನೇಕ ಯೋಜನೆಗಳು ಅವರನ್ನು ‌ತಲುಪುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿತ್ತಿರುವ ಕಾರ್ಮಿಕರನ್ನು ಖಾಯಂ ಗೊಳಿಸಬೇಕು ಹಾಗೂ ಈಗಾಗಲೇ ಹೈಕೋರ್ಟ್ ನಲ್ಲಿ ಇರುವ ಕೇಸ್ ಗಳನ್ನು ಮುಂದುವರಿಸಬೇಕು ಎಂದು ಕಾರ್ಮಿಕ ಸಂಘದದವರು ಬೇಡಿಕೆ ಮಾಡಿಕೊಂಡರು. 

 

ಸಭೆಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಾರ್ಮಿಕ ಮಂಡಳಿಯ ಸದಸ್ಯರು ಹಾಗೂ‌ ಇತರರು ಉಪಸ್ಥಿತರಿದ್ದರು.

 

 

ರೈತರು-ಕಾರ್ಮಿಕರಿಂದ ಮನವಿ ಸ್ವೀಕಾರ

 

ಸಭೆಯ ಬಳಿಕ ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಮತ್ತು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ರೈತರು ಹಾಗೂ ವಿವಿಧ ಕಾರ್ಖಾನೆಗಳ ಕಾರ್ಮಿಕರಿಂದ ಮನವಿಗಳನ್ನು ಸ್ವೀಕರಿಸಿದರು.