ನಿರೀಕ್ಷೆಯಂತೆ ಯೂಟರ್ನ್ ಹೊಡೆದ ಶ್ರೀಮಂತ ಪಾಟೀಲ ; ಬಿಜೆಪಿ ಹಣದ ಆಫರ್ ಕೊಟ್ಟಿರಲಿಲ್ಲವಂತೆ!

   ನಿರೀಕ್ಷೆಯಂತೆ ಯೂಟರ್ನ್ ಹೊಡೆದ ಶ್ರೀಮಂತ ಪಾಟೀಲ ; ಬಿಜೆಪಿ ಹಣದ ಆಫರ್ ಕೊಟ್ಟಿರಲಿಲ್ಲವಂತೆ!

 

 

ಬೆಳಗಾವಿ: ಆಪರೇಶನ್ ಕಮಲದ ಭಾಗವಾಗಿ “ಬಿಜೆಪಿ ನನಗೆ ಕೇಳಿದಷ್ಟು ಹಣದ ಆಫರ್ ನೀಡಿತ್ತು ಅದರೆ ನಾನು ಹಣ ಪಡೆದಿರಲಿಲ್ಲ’ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ನಿರೀಕ್ಷೆಯಂತೆ ಇಂದು ಯೂಟರ್ನ್ ಹೊಡೆದಿದ್ದಾರೆ. ಶ್ರೀಮಂತ ಪಾಟೀಲ ಯೂಟರ್ನ್ ಹೊಡೆಯಲು ಬಿಜೆಪಿ ವರಿಷ್ಠರು ಅವರನ್ನು ತರಾಟೆಗೆ ತೆಗೆದುಕೊಂಡಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

 

 

ಇಂದು ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ನಡೆದ ಮರಾಠಾ ಮುಖಂಡರ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಶ್ರೀಮಂತ ಪಾಟೀಲ, ‘ನನಗೆ ಬಿಜೆಪಿಯಿಂದ ಹಣದ ಆಫರ್ ಇರಲಿಲ್ಲ. ನಾನೇ ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದೆ. ಮೋದಿಯವರ ಕೆಲಸಕ್ಕೆ ಮತ್ತು ಬಿಜೆಪಿ ವಿಚಾರಧಾರೆಗೆ ಬೆಂಬಲ ಕೊಡುವುದಾಗಿ ಹೇಳಿದ್ದೆ’ ಎಂದು ಹೇಳಿದ್ದಾರೆ. ಆದರೆ, ನಿನ್ನೆಯ ಶ್ರೀಮಂತ ಪಾಟೀಲ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರಲ್ಲಿ ಅವರು ‘ಬಿಜೆಪಿ ನನಗೆ ಕೇಳಿದಷ್ಟು ಹಣ ಕೇಳಿದಷ್ಟು ಹಣ ಕೊಡುವ ಆಫರ್ ಕೊಟ್ಟಿತ್ತು’ ಎಂದು ಹೇಳಿದ್ದಾರೆ.

 

 

ಶ್ರೀಮಂತ ಪಾಟೀಲ ಯಾವ ರೀತಿಯಲ್ಲಿ ಬಿಜೆಪಿ ಸೇರಿದರು ಎನ್ನುವುದನ್ನು ರಾಜ್ಯದ ಜನರು ಮರೆತಿಲ್ಲ. ಅದನ್ನು ದೃಶ್ಯ ಮಾಧ್ಯಮಗಳು ಲೈವ್ ಆಗಿ ತೋರಿಸಿದ್ದವು. ಕಾಂಗ್ರೆಸ್ ಪಕ್ಷ ನೀಡಿದ್ದ ವಿಪ್ ನಿಂದ ಜಾರಿಕೊಳ್ಳಲು ಎದೆನೋವಿನ ಕಾರಣ ನೀಡಿ ಮುಂಬೈಗೆ ಹೋಗಿ ರಮೇಶ ಜಾರಕಿಹೊಳಿ ನೇತೃತ್ವದ ಭಿನ್ನಮತೀಯರ ಟೀಂ ಸೇರಿಕೊಂಡಿದ್ದರು. ಕಾಂಗ್ರೆಸ್ ಮುಖಂಡರ ಕೈಯಿಂದ ತಪ್ಪಿಸಿಕೊಳ್ಳಲು ನೇರವಾಗಿ ಮುಂಬೈಗೆ ತೆರಳದೆ, ಲಕ್ಷ್ಮಣ ಸವದಿ ಜೊತೆಗೂಡಿ ಕಾರು ಮೂಲಕ ಚೆನ್ನೈಗೆ ತೆರಳಿ ಅಲ್ಲಿಂದ ಮುಂಬೈಗೆ ಹಾರಿದ್ದರು. ಲಕ್ಷ್ಮಣ ಸವದಿ ಶ್ರೀಮಂತ ಪಾಟೀಲ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಸದನದಲ್ಲಿ ಗದ್ದಲ ಎಬ್ಬಿಸಿದ್ದರು.