ಪಾಲಿಕೆ ಚುನಾವಣೆ: ಶೇ. 50 ರಷ್ಟೇ ಮತದಾನ ; ಹುಡುಕಿದರೂ ಸಿಗುತ್ತಿಲ್ಲ ಕಾರಣ

ಪಾಲಿಕೆ ಚುನಾವಣೆ: ಶೇ. 50 ರಷ್ಟೇ ಮತದಾನ ; ಹುಡುಕಿದರೂ ಸಿಗುತ್ತಿಲ್ಲ ಕಾರಣ

 

 

ಬೆಳಗಾವಿ: ಈ ಬಾರಿಯ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಮುಗಿದು ಹೋಗಿದೆ. ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸ್ಪರ್ಧೆಯ ಕಾವು ಏರಿಸಿದ್ದಾಗಲೂ ನಗರದಲ್ಲಿನ ಅರ್ಧಕ್ಕೂ ಹೆಚ್ಚು ಮತದಾರರು ಮತಗಟ್ಟೆಗಳಿಗೆ ಬಾರದೆ ಮನೆಯಲ್ಲಿಯೇ ಉಳಿದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ.

 

 

ಒಟ್ಟು ಮತದಾನ ಕೇವಲ ಶೇ. 50.41  ರಷ್ಟಾಗಿದೆ. ಮತದಾನ ಕಡಿಮೆಯಾಗಲು ನಿಖರ ಕಾರಣ ಯಾರಿಗೂ ಗೊತ್ತಾಗುತ್ತಿಲ್ಲ. ಈ ಬಾರಿ ಮತಗಟ್ಟೆಗೆ ಬರಲು ಹವಾಮಾನ ತೊಂದರೆ ಅಥವಾ ಮಳೆ ಇದಾವುದೂ ಅಡ್ಡಿಯಾಗಿರಲಿಲ್ಲ. ಚುನಾವಣಾ ವೇಳೆಯನ್ನೂ ಆಯೋಗ ಒಂದು ಗಂಟೆಯ ಮಟ್ಟಿಗೆ ಹೆಚ್ಚಿಸಿತ್ತು. ಹೀಗಿರುವಾಗಲೂ ನಗರದಲ್ಲಿನ ಸುಶಿಕ್ಷಿತ ಮತದಾರರು ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಮತದಾನ ಮಾಡಿರುವುದಕ್ಕೆ ಸ್ವೀಪ್ ಕಮಿಟಿಯೇ ಉತ್ತರ ಹೇಳಬೇಕಾಗಿದೆ.

 

 

ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಜೊತೆಗೆ ಆಮ್ ಆದ್ಮಿ ಪಾರ್ಟಿ, ಎಐಎಂಐಎಂ ಕೂಡ ತಮ್ಮ ಅಭ್ಯರ್ಥಿಗಳನ್ನು ಇಳಿಸಿದ್ದವು. ಎಂಇಎಸ್ ಕೂಡ ಕೆಲವು ಅಭ್ಯರ್ಥಿಗಳನ್ನು ಘೋಷಿಸಿತ್ತು. ಹೀಗಿರುವಾಗಲೂ ಮತಗಟ್ಟೆಗಳತ್ತ ಮತದಾರ ಬೆನ್ನು ತೋರಿಸಿದ್ದಾನೆ. ಇದಕ್ಕೆ ಕಾರಣ ಏಣಿರಬಹುದು? ಕೊನೆಗೆ ಮತದಾರ ಪಾಲಿಕೆ ಚುನಾವಣೆ ಬಗ್ಗೆ ಭ್ರಮನಿರಸನಗೊಂಡಿದ್ದಾನಾ ಎನ್ನುವ ಪ್ರಶ್ನೆ ಮಾತ್ರ ಉಳಿಯುತ್ತದೆ.