ಕನ್ನಡ ಭಾಷಾ ನೀತಿ ಅನುಷ್ಠಾನ; ಹೋರಾಟಗಾರರನ್ನು ನಿರ್ಲಕ್ಷಿಸಿದ ರಾಜ್ಯ ಸರ್ಕಾರ

ಬೆಳಗಾವಿ: ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ 15 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ನವೆಂಬರ್ 18 ರಂದು ಹೊರಡಿಸಲಾಗಿರುವ ಈ ಆದೇಶದಲ್ಲಿ 15 ಜಿಲ್ಲೆಗಳಿಗೆ ತಲಾ ಐದು ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ನಾಮನಿರ್ದೇಶನದಲ್ಲಿ ಕನ್ನಡಪರ ಹೋರಾಟಗಾರರನ್ನು ಕೈಬಿಟ್ಟು ಇತರರಿಗೆ ಮಣೆ ಹಾಕಿರುವುದು ಈಗ ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಗೆ ಪ್ರೊ. ರವಿ ಭಜಂತ್ರಿ, ಸುನಂದಾ ಎಮ್ಮಿ, ಶ್ರೀರಂಗ ಜೋಶಿ, ಪ್ರೊ.ಹೆಚ್.ಐ.ತಿಮ್ಮಾಪೂರ ಮತ್ತು ಎ.ಎಲ್.ಕುಲಕರ್ಣಿ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ವಿಶೇಷವೆಂದರೆ ಇವರೆಲ್ಲರೂ ಬೆಳಗಾವಿ ನಗರದ ನಿವಾಸಿಗಳೇ ಆಗಿದ್ದಾರೆ, ಅಲ್ಲದೆ ಕನ್ನಡಪರ ಹೋರಾಟಗಳಲ್ಲಿ ವಿಶೇಷವಾಗಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಇಂತಹ ಸದಸ್ಯರಿಂದ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬಲ್ಲವು ಎನ್ನುವ ಪ್ರಶ್ನೆ ಎದುರಾಗಿದೆ.

ಸರ್ಕಾರ ಸದಸ್ಯರ ನೇಮಕಾತಿಗೆ ಯಾವ ಮಾನದಂಡವನ್ನು ಅನುಸರಿಸಿದೆ ಎನ್ನುವುದು ಇಲ್ಲಿ ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಹಲವಾರು ಹೋರಾಟಗಾರರು ಇರುವಾಗ, ಅವರನ್ನು ನಿರ್ಲಕ್ಷಿಸಿ, ಬೇರೆಯವರಿಗೆ ಕನ್ನಡ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿ ವಹಿಸುವುದು ಎಷ್ಟು ಸೂಕ್ತ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page