
ಇಂದು ಸಾರ್ವಜನಿಕ ಗಣಪ ಮೂರ್ತಿಗಳ ವಿಸರ್ಜನೆ; ಮೆರವಣಿಗೆ ಇಲ್ಲ
ಬೆಳಗಾವಿ: ಇಂದು ನಗರದಲ್ಲಿ ಸ್ಥಾಪನೆ ಮಾಡಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಕೊರೊನಾ ಕಾರಣದಿಂದಾಗಿ ಪ್ರತಿವರ್ಷದಂತೆ ಭವ್ಯ ಮೆರವಣಿಗೆ ಇರುವುದಿಲ್ಲ. ಇಂದು ಬೆಳಿಗ್ಗೆಯಿಂದಲೇ ಸಾರ್ವಜನಿಕ ಮೂರ್ತಿಗಳ ವಿಸರ್ಜನೆ ಆರಂಭಗೊಂಡಿದೆ.
ಬೆಳಗಾವಿ ಗಣೋಶೋತ್ಸವದ ಪ್ರಮುಖ ಆಕರ್ಷಣೆ ಎಂದರೆ ವಿಸರ್ಜನೆಯ ಭವ್ಯ ಮೆರವಣಿಗೆ. ಒಮ್ಮೊಮ್ಮೆ ಈ ಮೆರವಣಿಗೆ 20 ಗಂಟೆಗಳಿಗೂ ಹೆಚ್ಚು ನಡೆಯುತ್ತದೆ. ಹಲವಾರು ಸ್ಥಳೀಯ ವಾಹಿನಿಗಳು ಇದನ್ನು ಲೈವ್ ಕವರೇಜ್ ಮಾಡುತ್ತವೆ. ಹೀಗಾಗಿ ಜನಜಂಗುಳಿಯ ಕಾರಣದಿಂದ ಹೊರಗೆ ಬಾರದವರು ಮನೆಯಿಂದಲೇ ಗಣೇಶ ವಿಸರ್ಜನೆಯ ಅದ್ಭುತ ದೃಶ್ಯಗಳನ್ನು ವೀಕ್ಷಿಸುತ್ತಾರೆ.
ಬೆಳಗಾವಿಯಲ್ಲಿ ಭಾಷಾ ರಾಜಕೀಯದ ಜೊತೆಗೆ ಆಗಾಗ ಕೋಮು ಗಲಭೆಗಳು ನಡೆಯುವುದರಿಂದ, ಪೊಲೀಸ್ ಇಲಾಖೆ ಮಟ್ಟಿಗೆ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿಯುತವಾಗಿ ನೆರವೇರಿಸುವುದು ಸವಾಲಿನ ಸಂಗತಿಯಾಗಿರುತ್ತದೆ. ಹೀಗಾಗಿ ಬೇರೆ ಬೇರೆ ಜಿಲ್ಲೆಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕರೆಸಿ ನಿಯೋಜಿಸಲಾಗಿರುತ್ತದೆ.
ಆದರೆ, ಕೊರೊನಾ ಕಾರಣದಿಂದ ಈ ವರ್ಷ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ನಾಳೆ ಬೆಳಗಿನ 6 ಗಂಟೆವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.