ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬೆಳಗಾವಿಯ ಹೇಮಾ ಅಂಗಡಿ ಆಯ್ಕೆ: ಹರಿದು ಬರುತ್ತಿದೆ ಶುಭಾಷಯಗಳ ಮಹಾಪೂರ

   ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬೆಳಗಾವಿಯ ಹೇಮಾ ಅಂಗಡಿ ಆಯ್ಕೆ: ಹರಿದು ಬರುತ್ತಿದೆ ಶುಭಾಷಯಗಳ ಮಹಾಪೂರ

 

 

ಬೆಳಗಾವಿ: 2021 - 22 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯಿಂದ ನಗರದ ಭಾಂದೂರ ಗಲ್ಲಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮರಾಠಿ)ಯ ಕನ್ನಡ ಶಿಕ್ಷಕಿ ಹೇಮಾ ಅಂಗಡಿ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾಗಿದ್ದಾರೆ.

 

 

ಸರ್ಕಾರವು ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ ಸರ್ಕಾರ ‘ಮಾತೆ ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದೆ.  ಬೆಳಗಾವಿ ಜಿಲ್ಲೆಯಿಂದ ಆಯ್ಕೆಯಾಗಿರುವ ಹೇಮಾ ಅಂಗಡಿ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಹೇಮಾ‌ ಅವರು ಶಿಕ್ಷಣ ತಜ್ಞ ಉದಯ ಇಡಗಲ್ ಅವರ ಧರ್ಮಪತ್ನಿಯಾಗಿದ್ದಾರೆ.

 

 

ಹೇಮಾ ಅಂಗಡಿ ಅವರ ಸೇವೆಗೆ ಈ ಮುಂಚೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಉತ್ತಮ ಕನ್ನಡ ಶಿಕ್ಷಕಿ ಪ್ರಶಸ್ತಿ ಮತ್ತು ನೇಷನ್ ಬಿಲ್ಡರ್ ಅವಾರ್ಡ್ ಗಳು ಬಂದಿವೆ. ಪ್ರಶಸ್ತಿ ವಿಜೇತ ಶಿಕ್ಷಕರಿಗೆ ರೂ.10 ಸಾವಿರ ನಗದು ಪುರಸ್ಕಾರ ಮತ್ತು ಅವರ ಶಾಲೆಗಳ ಅಭಿವೃದ್ಧಿಗೆ ರೂ.50 ಸಾವಿರದಂತೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ನೀಡಲಾಗುವುದು.

 

 

ಹೇಮಾ ಅಂಗಡಿ ಅವರ ಕುರಿತು ಒಂದಿಷ್ಟು:

ಹೇಮಾ ಅಂಗಡಿ ಅವರು ಕಳೆದ 21 ವರ್ಷಗಳಿಂದ ಗಡಿಭಾಗದಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ಸಂಘ-ಸಂಸ್ಥೆಗಳು, ಪಾಲಕರು ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಗಳಿಸಿದ್ದಾರೆ. ಬರ್ಕ್ಲಿ ಯುನಿವರ್ಸಿಟಿ ಕ್ಯಾಲಿಫೋರ್ನಿಯ ವತಿಯಿಂದ ಪುಣೆಯಲ್ಲಿ ಏರ್ಪಡಿಸಿದ್ದ Beauty and Joy of computing ಕಂಪ್ಯೂಟರ್ ಭಾಷೆಯ ವಿಚಾರಗೋಷ್ಠಿಯಲ್ಲಿ ಭಾಗವಹಿಸುವುದರ ಜೊತೆಗೆ ಅಂತರಾಷ್ಟ್ರೀಯ, ರಾಜ್ಯ, ಜಿಲ್ಲಾಮಟ್ಟದ ವಸ್ತುಪ್ರದರ್ಶನ (ZIIEI) ಹಾಗೂ ವಿಚಾರಗೋಷ್ಠಿಗಳಲ್ಲಿಯೂ ಭಾಗವಹಿಸಿ ವಿಚಾರಗಳನ್ನು ಮಂಡಿಸಿದ್ದಾರೆ.

 

 

ಮಕ್ಕಳ ಬಾಲ್ಯ ಹಾಗೂ ಶಿಕ್ಷಣದ ಕುರಿತಂತೆ ರೆಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಮಕ್ಕಳು ಮನೆಯಲ್ಲಿಯೇ ಕುಳಿತು ಅಭ್ಯಸಿಸಲು 20ಕ್ಕೂ ಅಧಿಕ ಯೂಟ್ಯೂಬ್ ಪಾಠಗಳು, ಮಕ್ಕಳ ದಾಖಲಾತಿ ಹೆಚ್ಚಿಸಲು ವಿಶೇಷ ಕ್ರಮಗಳು, ಶಿಕ್ಷಕರಿಗೆ ಚಟುವಟಿಕೆ ಬ್ಯಾಂಕ್ ತಯಾರಿಸುವಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತ್ಯ ರಚನೆ, ಮಕ್ಕಳ ಸಂತೋಷದಾಯಕ ಕಲಿಕೆಗಾಗಿ ಕನ್ನಡ ಲ್ಯಾಂಗ್ವೇಜ್ ಲ್ಯಾಬ್, ತಂತ್ರಜ್ಞಾನದ ಮೂಲಕ ಬೋಧನೆ, ಬ್ರೇನ್ ಟ್ರೇನಿಂಗ್ ವ್ಯಾಯಾಮಗಳ ಮೂಲಕ ಮಕ್ಕಳಲ್ಲಿ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ವಿಶಿಷ್ಠ ಪ್ರಯತ್ನ, ದ್ವಿತೀಯ ಭಾಷೆಯಾಗಿ ಕನ್ನಡ ಬೋಧಿಸುವ ಶಿಕ್ಷಕರಿಗೆ ವೆಬಿನಾರ್ ಮೂಲಕ ತರಬೇತಿ, ಇದರ ಜೊತೆಗೆ ಗುಂಪು ಚಟುವಟಿಕೆ, ಭಾಷಾ ಮೇಳ, ಸಂದರ್ಶನ ಕೀರ್ತನೆ, ಘೋಷಣೆ, ಕ್ಷೇತ್ರ ದರ್ಶನ, ಆಟದ ಕಾರ್ಡಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿದ್ದಾರೆ. ಹೆಣ್ಣು ಮಕ್ಕಳಿಗಾಗಿಯೂ ಸ್ವರಕ್ಷಣೆ ತರಬೇತಿ ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.