ಬೆಳಗಾವಿ ಜಿಲ್ಲೆಯ 464 ಆಸ್ಪತ್ರೆಗಳಿಗೆ ನೊಟೀಸ್ ಜಾರಿ ಮಾಡಿದ ಆರೋಗ್ಯ ಇಲಾಖೆ

ಬೆಳಗಾವಿ: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ 464 ಆಸ್ಪತ್ರೆ / ಕ್ಲಿನಿಕ್ ಗಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಾಗಿದೆ. ಲಾಕ್ ಡೌನ್  ಸಂದರ್ಭದಲ್ಲಿ ಸರ್ಕಾರದ ನಿರ್ದೇಶನವಿದ್ದರೂ ಆಸ್ಪತ್ರೆ / ಕ್ಲಿನಿಕ್ ಆರಂಭಿಸದೆ ಇರುವ ಕಾರಣಕ್ಕೆ ಈ ನೊಟೀಸ್ ಜಾರಿ ಮಾಡಲಾಗಿದೆ.

ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಇರುವ ಎಲ್ಲ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳನ್ನು ತೆರೆಯಲು ಸರ್ಕಾರದ ವತಿಯಿಂದ ನಿರ್ದೇಶನ ನೀಡಲಾಗಿತ್ತು. ಆಸ್ಪತ್ರೆಗಳು ಸರ್ಕಾರದಿಂದ ಬಿಡುಗಡೆಗೊಳಿಸಲಾದ ‘ಆಪ್’ ಒಂದನ್ನು ಡೌನ್ ಲೋಡ್ ಮಾಡಿಕೊಂಡು, ಅದರಲ್ಲಿ ನೋಂದಣಿ ಆಗಬೇಕಾಗಿತ್ತು. ಜೊತೆಗೆ  ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಲಕ್ಷಣಗಳನ್ನು ಅದರಲ್ಲಿ ದಾಖಲಿಸಿ ಪ್ರತಿದಿನ ವರದಿ ಕಳಿಸಬೇಕೆಂದು ಸೂಚಿಸಲಾಗಿತ್ತು. ರೋಗದ ಲಕ್ಷಣಗಳನ್ನು ಹೊಂದಿರುವವರನ್ನು ಕಂಡು ಹಿಡಿಯಲು ಮತ್ತು  ಅಂತಹವರ ಮೇಲೆ ನಿಗಾ ಇರಿಸಲು ಈ ವ್ಯವಸ್ಥೆ ಮಾಡಲಾಗಿತ್ತು. ಆದರೆ 464 ಆಸ್ಪತ್ರೆಗಳು ಸರ್ಕಾರದ ಆಪ್ ಡೌನ್ ಲೋಡ್ ಮಾಡಿಕೊಂಡಿಲ್ಲ. ಈ ಆಸ್ಪತ್ರೆಗಳು ಬಾಗಿಲು ಮುಚ್ಚಿಕೊಂಡಿದ್ದರಿಂದ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ.

‘ಟುಡೇ ಬ್ರೇಕಿಂಗ್ಸ್’ ನೊಂದಿಗೆ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ. ಶಶಿಕಾಂತ ಮುನ್ಯಾಳ ಅವರು ಜಿಲ್ಲೆಯಲ್ಲಿನ 2,395 ನೋಂದಣೀಕೃತ ಆಸ್ಪತ್ರೆಗಳ ಪೈಕಿ 1,931 ಆಸ್ಪತ್ರೆಗಳು ಆಪ್ ಡೌನ್ ಲೋಡ್ ಮಾಡಿಕೊಂಡು, ರೋಗಿಗಳಿಗೆ ಸೇವೆ ನೀಡುತ್ತಿವೆ. ಉಳಿದವುಗಳಿಗೆ ಸರ್ಕಾರದ ನಿರ್ದೇಶನದಂತೆ ನೊಟೀಸ್ ಹೊರಡಿಸಲಾಗಿದೆ ಎಂದು ತಿಳಿಸಿದರು.

Visits: 1457

Leave a Reply

Your email address will not be published. Required fields are marked *

You cannot copy content of this page