‘ಹಸಿದವರತ್ತ ನಮ್ಮ ಚಿತ್ತ’ : ಹೊಟ್ಟೆಯೊಳಗೆ ನಿಗಿನಿಗಿ ಸುಡುವ ಕೆಂಡವನ್ನು ಶಾಂತಗೊಳಿಸುವ ಅಭಿಯಾನ

ಹಸಿವಿಗೆ ಜಾತಿ-ಧರ್ಮವಿಲ್ಲ. ಭಾಷೆಯ ಹಂಗಿಲ್ಲ. ಅದು ಹೊಟ್ಟೆಯೊಳಗಿನ ನಿಗಿನಿಗಿ ಸುಡುವ ಕೆಂಡ. ನೀರಿಗೆ ಶಾಂತವಾಗುವುದಿಲ್ಲ. ಹಸಿವಿನ ಮಹತ್ವ ತಿಳಿದೇ ‘ಅನ್ನದಾಸೋಹ’ ಎನ್ನುವ ಪರಿಕಲ್ಪನೆ ಲಿಂಗಾಯತದಲ್ಲಿ ಹುಟ್ಟಿಕೊಂಡಿರಬಹುದು. ಹಸಿವಾದಾಗಲೆಲ್ಲ ಅನ್ನ ಪ್ರಸಾದದಂತೆ ಗೋಚರಿಸುತ್ತದೆ. ಕೊಟ್ಟವರು ದೇವರಂತೆ ಕಾಣುತ್ತಾರೆ.

ಈ ಕೊರೊನಾದ ಕೆಟ್ಟ ದಿನಗಳಲ್ಲಿ ಅನೇಕರು ದೇವರಂತೆ, ದೇವದೂತರಂತೆ ಕೆಲಸ ಮಾಡುತ್ತಿದ್ದಾರೆ. ಹಸಿದವರ ಹೊಟ್ಟೆಯ ಬೆಂಕಿ ಆರಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾರ್ಥವಿಲ್ಲದೆ ಮಾಡುವ ಈ ಕೆಲಸದಲ್ಲಿ ಎಂಥದೋ ಅವ್ಯಕ್ತ ಅಧ್ಯಾತ್ಮಿಕ ಸುಖವಿದೆ. ಮಾನಸಿಕ ನೆಮ್ಮದಿ ಇದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕೊಡುವ ಮನಸ್ಸುಗಳಿರುತ್ತವೆ. ಆದರೆ ತೆಗೆದುಕೊಳ್ಳುವ ಕೈಗಳು ಕಾಣುವುದಿಲ್ಲ. ಕೊಡುವ ಮನಸ್ಸುಗಳಿಗೆ ಮತ್ತು ತೆಗೆದುಕೊಳ್ಳುವ ಕೈಗಳಿಗೆ ಕೊಂಡಿಯಾಗಿ ಕಳೆದ ಎರಡು ತಿಂಗಳಿಂದ ಹಗಲಿರುಳೆನ್ನದೆ ಶ್ರಮಿಸುತ್ತಿರುವವರು ಬೆಳಗಾವಿಯ ಕನ್ನಡದ ಕಟ್ಟಾಳು ಅಶೋಕ ಚಂದರಗಿ.

ಅಶೋಕ ಚಂದರಗಿ ಅವರು ಆರಂಭಿಸಿರುವ ‘ಹಸಿದವರತ್ತ ನಮ್ಮ ಚಿತ್ತ’ ಅಭಿಯಾನಕ್ಕೆ ಈಗ ಎರಡು ತಿಂಗಳು. ಆವರು ಆರಂಭಿಸಿದ ಅಭಿಯಾನಕ್ಕೆ ಸ್ವಾಮೀಜಿಗಳೂ ಸೇರಿದಂತೆ ಹಲವಾರು ಮಂದಿ ಕೈಹಚ್ಚಿದ್ದಾರೆ. ಬೆನ್ನು ತಟ್ಟಿದ್ದಾರೆ. ಒಳ್ಳೆಯ ಮನಸ್ಸಿನಿಂದ ಆರಂಭಗೊಂಡ ಅಭಿಯಾನ ನಿಲ್ಲದಂತೆ ನೋಡಿಕೊಂಡಿದ್ದಾರೆ. ಇದರಿಂದ ಕೋವಿಡ್ ಸಂಕಷ್ಟಕ್ಕೆ ಗುರಿಯಾಗಿರುವ ಸಾವಿರಾರು ಬಡವರು, ಕೂಲಿಕಾರರ ಹೊಟ್ಟೆ ತುಂಬಿದೆ. ಕೊರೊನಾ ವೈರಸ್ ಭಯಕ್ಕೆ ಜನರು ಹೊಸ್ತಿಲು ದಾಟಿ ಹೊರಗೆ ಬರಲು ಹೆದರಿಕೊಳ್ಳುತ್ತಿರುವಾಗ, 60 ರ ವಯಸ್ಸಿನ ಚಂದರಗಿ ಅವರು ಯುವಕರನ್ನೂ ನಾಚಿಸುವಂತೆ ಸಂಕಷ್ಟಕ್ಕೆ ಒಳಗಾಗಿರುವ ಸಲುವಾಗಿ ಶ್ರಮಿಸುತ್ತಿರುವುದು ಎಂಥವರಿಗೂ ಪ್ರೇರಣೆ ನೀಡುವಂತಹದು.

ಕೊಡುವವರ ಸಹಾಯ ಪಡೆಯಲು ಮತ್ತು ಅದನ್ನು ಅಗತ್ಯವಿದ್ದವರಿಗೆ ತಲುಪಿಸಲು ಎರಡು ಗಾಡಿಗಳು ಅಶೋಕ ಚಂದರಗಿ ಅವರ ಮನೆ ಮುಂದೆ ಯಾವತ್ತೂ ಸಿದ್ಧವಾಗಿ ನಿಂತಿರುತ್ತವೆ. ನಿಮಗೆ ದಾನ ಮಾಡುವ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಮನಸ್ಸಿದ್ದರೆ, ಒಂದು ಕರೆ ಮಾಡಿದರೆ ಸಾಕು, ನಿಮ್ಮ ಮನೆ ಮುಂದೆ ಅವರ ಗಾಡಿ ಬಂದು ನಿಲ್ಲುತ್ತದೆ. ಅನೇಕರು ಅಕ್ಕಿ, ಗೋಧಿ, ಬೇಳೆ, ಎಣ್ಣೆ, ತರಕಾರಿ, ಉಪ್ಪು ಇನ್ನೇನೋ ಇದೆ ತೆಗೆದುಕೊಂಡು ಹೋಗಿ ಎಂದು ಕರೆ ಮಾಡುತ್ತಾರೆ. ಅದನ್ನು ತಂದು ಆಹಾರದ ಕಿಟ್ ಸಿದ್ಧಪಡಿಸುತ್ತಾರೆ. ಕಿಟ್ ಗಾಗಿ ಕಡಿಮೆ ಬಿದ್ದ ಸರಂಜಾಮುಗಳನ್ನು ತಮ್ಮದೇ ಹಣದಿಂದ ಭರಿಸುತ್ತಾರೆ. ಆರಂಭದಲ್ಲಿ ಕಷ್ಟದಲ್ಲಿದ್ದ ಕುಟುಂಬಗಳು ನೇರವಾಗಿ ಕರೆ ಮಾಡಿ ಕಷ್ಟ ಹೇಳಿಕೊಳ್ಳುತ್ತಿದ್ದವು. ಎಷ್ಟೋ ಸಲ ಒಂದೇ ಕುಟುಂಬವಿದ್ದರೂ ಅಲ್ಲಿಗೆ ಕಿಟ್ ತಲುಪಿಸಿ ಬರಲಾಗಿದೆ. ಈಗ ಅಭಿಯಾನ ವಿಸ್ತರಣೆಗೊಂಡಿದೆ. ಯಾವ ಪ್ರದೇಶದಲ್ಲಿ ಎಷ್ಟು ಕುಟುಂಬಗಳಿಗೆ ಆಹಾರದ ಕಿಟ್ ಗಳ ಅಗತ್ಯವಿದೆ ಎನ್ನುವುದನ್ನು ಜನರೇ ಕರೆ ಮಾಡಿ ಹೇಳುತ್ತಿದ್ದಾರೆ. ಇದು ಜನರು ಅಶೋಕ ಚಂದರಗಿ ಅವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ.

ಎರಡು ತಿಂಗಳ ಹಿಂದಿನ ಮಾತದು. ಬೆಳಗಾವಿ ಕೋಟೆ ಕೆರೆಯ ಪಕ್ಕದ ರಸ್ತೆಯಲ್ಲಿನ ಫುಟಪಾತ್ ಮೇಲೆ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 70 ಮಂದಿ ಕಲ್ಲು ಕಡೆಯುವ ಕಾರ್ಮಿಕರು ಎರಡು ದಿನಗಳಿಂದ ಊಟವಿಲ್ಲದೆ ನೀರು ಕುಡಿದು ಮಲಗಿದ್ದಾರೆ ಎನ್ನುವ ಸುದ್ದಿ ಟಿವಿನಲ್ಲಿ ಪ್ರಸಾರವಾಯಿತು. ಗೆಳೆಯರ ಸಹಾಯ ಪಡೆದ ಅಶೋಕ ಚಂದರಗಿ, ತಕ್ಷಣಕ್ಕೆ ಅಲ್ಲಿಗೇ ಹೋಗಿ ಅವರಿಗೆ ಊಟ ಮತ್ತು ದಿನಸಿ ಕೊಟ್ಟರು. ಪಡೆದವರ ಕಣ್ಣಲ್ಲಿ ಸಂತೋಷದ ನೀರು ತುಂಬಿದ್ದರೆ, ಕೊಟ್ಟವರ ಕಣ್ಣಲ್ಲಿ ಸಂತೃಪ್ತಿ. ಆ ಭಾವುಕ ಘಟನೆ ಚಂದರಗಿ ಅವರ ಮನಸ್ಸು ಕಲಕಿತು. ‘ಹಸಿದವರತ್ತ ನಮ್ಮ ಚಿತ್ತ’ ಅಭಿಯಾನಕ್ಕೆ ಅದು ಕಾರಣವಾಯಿತು.

ಹಾಗೆ ಅಶೋಕ ಚಂದರಗಿ ಅವರು ಕನ್ನಡ ಹೋರಾಟಗಾರರು ಎಂದೇ ರಾಜ್ಯಕ್ಕೆ ಪರಿಚಯ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ಬೆಳಗಾವಿಯಲ್ಲಿ ಕನ್ನಡಕ್ಕಾಗಿ ನಡೆಸಿದ ಹೋರಾಟದ ದಿನಗಳನ್ನು ಅವರು ಎಳೆಎಳೆಯಾಗಿ ಬಿಡಿಸಿ ಹೇಳಬಲ್ಲರು. ಕನ್ನಡ ಬಲವರ್ಧನೆಗೆ ಸರ್ಕಾರಗಳು ತೆಗೆದುಕೊಂಡ ನಿರ್ಧಾರಗಳು, ಅದಕ್ಕೆ ಕಾರಣವಾದ ವ್ಯಕ್ತಿಗಳು, ಕಾನೂನಿನ ಹೋರಾಟಗಳು, ಇವುಗಳ ಮಾಹಿತಿ ಕಾಲಮಾನದ ಸಮೇತ ಅವರ ನಾಲಗೆಯ ತುದಿ ಮೇಲೆ ಇರುತ್ತದೆ. ಬೆಳಗಾವಿ ಮಾಧ್ಯಮದವರ ಮಟ್ಟಿಗೆ ಅಶೋಕ ಚಂದರಗಿ ಬೇಕಾದಾಗ ಸುಲಭವಾಗಿ ಕೈಗೆ ಸಿಗುವ ಚಿಕ್ಕ ವಿಕಿಪೀಡಿಯಾ ಇದ್ದಂಗೆ.

ಭಾಷೆ ಅಷ್ಟೇ ಅಲ್ಲ, ಜಿಲ್ಲೆಗೆ ಯಾವ ವಿಷಯದಲ್ಲಿ ಅನ್ಯಾಯವಾದರೂ ಅಶೋಕ ಚಂದರಗಿ ಧ್ವನಿ ಎತ್ತಿದ್ದಾರೆ. ಬೆಳಗಾವಿಯ ಅಭಿವೃದ್ಧಿಯನ್ನು ನಿರ್ಲಕ್ಷಿಸುವ ರಾಜಕಾರಣಿಗಳ ವಿರುದ್ಧ ಆಗಾಗ ಚಾಟಿ ಬೀಸುತ್ತ ಇರುತ್ತಾರೆ. ಈ ಕೋವಿಡ್ ಮಹಾಮಾರಿಯ ಕೆಟ್ಟ ದಿನಗಳಲ್ಲಿ ಸಮಾಜೋಮುಖಿಯಾಗಿ ಸ್ಪಂದಿಸುವ ಅವರ ಇನ್ನೊಂದು ಮುಖ ಬೆಳಕಿಗೆ ಬಂದಿದೆ. ಅವರ ‘ಹಸಿದವರತ್ತ ನಮ್ಮ ಚಿತ್ತ’ ಅಭಿಯಾನ ಯಶಸ್ವಿಯಾಗಿದೆ. ಅದಕ್ಕೆ ಇದುವರೆಗೆ ಅವರು ಗಳಿಸಿದ ಜನರ ವಿಶ್ವಾಸವೇ ಕಾರಣ. ಅಶೋಕ ಚಂದರಗಿ ಅವರನ್ನು ಸಂಪರ್ಕಿಸಲು 9620114466 ನಂಬರಿಗೆ ಕರೆ ಮಾಡಿ.

ರವೀಂದ್ರ ಉಪ್ಪಾರ

Leave a Reply

Your email address will not be published. Required fields are marked *

You cannot copy content of this page