ಬೆಳಗಾವಿ: ಜಿಲ್ಲೆಯಲ್ಲಿ ಅವಧಿ ಪೂರ್ಣಗೊಳಿಸುತ್ತಿರುವ 477 ಗ್ರಾ.ಪಂ.ಗಳ ಚುನಾವಣೆಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಜಿಲ್ಲೆಯಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ನಾಳೆ (ಡಿ.7) ಯಿಂದಲೇ ನಾಮಪತ್ರ ಸ್ವೀಕಾರ ಆರಂಭಗೊಳ್ಳಲಿದೆ. ಚುನಾವಣೆಗೆ ಇವಿಎಂ ಬದಲಾಗಿ ಬ್ಯಾಲೆಟ್ ಬಾಕ್ಸ್ ಬಳಸಲಾಗುತ್ತಿದ್ದು, ನೋಟಾಗೆ ಅವಕಾಶ ಇರುವುದಿಲ್ಲ.
ಮೊದಲ ಹಂತದ ಚುನಾವಣೆಯು ಬೆಳಗಾವಿ (55), ಖಾನಾಪೂರ (51), ಹುಕ್ಕೇರಿ (52), ಬೈಲಹೊಂಗಲ (33), ಕಿತ್ತೂರ (16), ಗೋಕಾಕ (32) ಹಾಗೂ ಮೂಡಲಗಿ (20) ತಾಲೂಕುಗಳ ಒಟ್ಟು 259 ಗ್ರಾ.ಪಂ.ಗಳಿಗೆ ನಡೆಯಲಿದೆ. ಸೋಮವಾರ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸ್ವೀಕಾರ ಆರಂಭಗೊಳ್ಳಲಿದೆ. ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಡಿ.12 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿ.14 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಡಿ.22 ರಂದು ಮತದಾನ ನಡೆಯಲಿದೆ.
ಎರಡನೇ ಹಂತದ ಚುನಾವಣೆಯು ಸವದತ್ತಿ (40), ರಾಮದುರ್ಗ (33), ಚಿಕ್ಕೋಡಿ (36), ನಿಪ್ಪಾಣಿ (27), ಅಥಣಿ (41), ಕಾಗವಾಡ (8) ಹಾಗೂ ರಾಯಬಾಗ (33) ತಾಲೂಕುಗಳ ಒಟ್ಟು 218 ಸ್ಥಾನಗಳಿಗೆ ನಡೆಯಲಿದೆ. ಡಿ.11 ರಿಂದ ನಾಮಪತ್ರ ಸ್ವೀಕಾರ ಆರಂಭಗೊಳ್ಳಲಿದ್ದು, ಡಿ.16 ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ಡಿ.17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.19 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.27 ರಂದು ಮತದಾನ ನಡೆಯಲಿದೆ. ಎರಡೂ ಹಂತದ ಚುನಾವಣೆಗಳ ಮತಎಣಿಕೆ ಡಿ.30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಪ್ರಸಕ್ತ ಚುನಾವಣೆಯಲ್ಲಿ 12,84,695 ಪುರುಷ ಮತದಾರರು ಹಾಗೂ 12,39,486 ಮಹಿಳಾ ಮತದಾರರು ಹೀಗೆ ಒಟ್ಟು 25,24,181 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದು, ಅದಕ್ಕಾಗಿ 3,747 ಮತಗಟ್ಟೆಗಳನ್ನು ರಚಿಸಲಾಗುವುದು. ಇದು ಪಕ್ಷರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳ ಚಿಹ್ನೆ ಮತ್ತು ಮುಖಂಡರ ಭಾವಚಿತ್ರ ಬಳಸುವುದು ನಿಷಿದ್ಧವಾಗಿದೆ.
ಬೆಳಗಾವಿ ತಾಲೂಕಿನ ಮಚ್ಛೆ ಹಾಗೂ ಪೀರನವಾಡಿ, ಗೋಕಾಕ ತಾಲೂಕಿನ ದೂಪದಾಳ, ಅಂಕಲಗಿ ಮತ್ತು ಅಕ್ಕತಂಗೇರಹಾಳ, ಸವದತ್ತಿ ತಾಲೂಕಿನ ಯರಗಟ್ಟಿ ಹಾಗೂ ಕಾಗವಾಡ ತಾಲೂಕಿನ ಕಾಗವಾಡ ಗ್ರಾ.ಪಂ.ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೆ ಏರಿಸಿರುವ ಕಾರಣ ಇಲ್ಲಿ ಚುನಾವಣೆ ನಡೆಯುವುದಿಲ್ಲ.