ಬಿಜೆಪಿ ವತಿಯಿಂದ ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರದಲ್ಲಿ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಉಚಿತ ವಿತರಣೆ ಆರಂಭ

ಬೆಳಗಾವಿ: ಜಿಲ್ಲಾ (ಗ್ರಾಮೀಣ) ಬಿಜೆಪಿ ಮತ್ತು ಪಕ್ಷದ ವೈದ್ಯಕೀಯ ಘಟಕದ ವತಿಯಿಂದ ಖಾನಾಪೂರ ಮತ್ತು ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರಗಳಲ್ಲಿನ ಸುಮಾರು 1 ಲಕ್ಷ ಕುಟುಂಬಗಳಿಗೆ ಕೊರೊನಾ ವಿರುದ್ಧ ಹೋರಾಡಲು ಬೇಕಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮ ಆರಂಭಗೊಂಡಿದೆ.

ಬೆಳಗಾವಿ ಜಿಲ್ಲಾ (ಗ್ರಾಮೀಣ) ಅಧ್ಯಕ್ಷ ಸಂಜಯ ಪಾಟೀಲ ಮತ್ತು ಬೆಳಗಾವಿ ಬಿಜೆಪಿ ವೈದ್ಯಕೀಯ ಘಟಕದ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಯುಷ್ ಇಲಾಖೆಯು ಮಾನ್ಯತೆ ನೀಡಿರುವ ಹೋಮಿಯೋಪಧಿಕ ಗುಳಿಗೆಗಳನ್ನು ಬಿಜೆಪಿ ಕಾರ್ಯಕರ್ತರ ಮೂಲಕ ಉಚಿತವಾಗಿ ಮನೆಮನೆಗೆ ವಿತರಿಸಲಾಗುತ್ತಿದೆ.

 ಇಂದು ಬಾಳೇಕುಂದ್ರಿ, ಸಾಂಬ್ರಾ, ಮುತಗಾ, ಮಾರಿಹಾಳ, ಸುಳೇಭಾವಿ, ನಿಲಜಿ, ಹುದಲಿ, ಖನಗಾಂವ, ಕರಡಿಗುದ್ದಿ ಮೊದಲಾದ ಗ್ರಾಮಗಳಲ್ಲಿನ ಸುಮಾರು 5,000 ಕುಟುಂಬಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ವಿತರಿಸಲಾಯಿತು. ನಿನ್ನೆ ಉಚಗಾಂವ, ರಾಕಸಕೊಪ್ಪ, ಬೆಕ್ಕಿನಕೆರೆ, ಅತ್ತಿವಾಟ, ಬಸುರ್ತೆ, ಅಂಬೇವಾಡಿ, ಮಣ್ಣೂರ ಹಾಗೂ ಗೋಜಗಾ ಗ್ರಾಮಗಳ 4,500 ಕ್ಕೂ ಹೆಚ್ಚು ಕುಟುಂಬಗಳಿಗೆ ಮಾತ್ರೆಗಳನ್ನು ವಿತರಿಸಲಾಗಿತ್ತು.

ಪಂತಬಾಳೇಕುಂದ್ರಿ ಗ್ರಾಮದಲ್ಲಿ ಇಂದು ನಡೆದ ಮಾತ್ರೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸೋನಾಲಿ ಸರ್ನೋಬತ್ ಅವರು, ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಶೇ. 95 ರಷ್ಟು ಕೊರೊನಾ ತಗುಲದಂತೆ ನೋಡಿಕೊಳ್ಳಬಹುದು. ಈಗ ವಿತರಿಸಲಾಗುತ್ತಿರುವ ‘ಅರ್ಸೇನಿಕ್ ಅಲ್ಬಂ 30’ ಹೋಮಿಯೋಪಧಿಕ ಮಾತ್ರೆಗಳು ಕೊರೊನಾ ತಡೆಗಟ್ಟುವ ಸಲುವಾಗಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಭಾರತ ಸರ್ಕಾರ ಹೇಳಿದೆ ಎಂದು ತಿಳಿಸಿದರು. ಮಾತ್ರೆಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎನ್ನುವುದನ್ನು ಡಾ.ಸೋನಾಲಿ ಸರ್ನೋಬತ್ ಇದೇ ಸಂದರ್ಭದಲ್ಲಿ ತಿಳಿಸಿಕೊಟ್ಟರು.

ಪಂತಬಾಳೇಕುಂದ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ (ಗ್ರಾಮೀಣ) ಘಟಕದ ಬಿಜೆಪಿ ಅಧ್ಯಕ್ಷ ಧನಂಜಯ ಜಾಧವ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ ಮೋಹಿತೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯುವರಾಜ ಜಾಧವ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Visits: 255

Leave a Reply

Your email address will not be published. Required fields are marked *

You cannot copy content of this page