ಕಾನ್ಸಟೆಬಲ್ ಹುದ್ದೆಯ ಸಿಇಟಿ ಪರೀಕ್ಷೆ; ಬೆಳಗಾವಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ನಾಲ್ವರು ಬದಲಿ ಅಭ್ಯರ್ಥಿಗಳು ಅರೆಸ್ಟ್

ಬೆಳಗಾವಿ: ಇಂದು ಬೆಳಗಾವಿ ನಗರದ 39 ಕೇಂದ್ರಗಳಲ್ಲಿ ಜರುಗಿದ ಎಸ್.ಆರ್.ಪಿ.ಸಿ/ ಐ.ಆರ್.ಪಿ.ಸಿ ಮತ್ತು ಕೆ.ಎಸ್.ಆರ್.ಪಿ ಪುರುಷ ಮತ್ತು ಮಹಿಳಾ ಕಾನ್ಸಟೆಬಲ್ ಹುದ್ದೆಗಳಿಗಾಗಿ ನಡೆದ ಸಿಇಟಿ ಪರೀಕ್ಷೆಯಲ್ಲಿ, ಮೂಲ ಅಭ್ಯರ್ಥಿಗಳ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ ನಾಲ್ವರು ಅಭ್ಯರ್ಥಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಲಾಗಿದೆ.

ಉದ್ಯಮಬಾಗದ ಜಿಐಟಿ ಕಾಲೇಜು, ಮಾಳಮಾರುತಿಯಲ್ಲಿನ ಲವ್ ಡೇಲ್ ಸೆಂಟ್ರಲ್ ಸ್ಕೂಲ್, ಟಿಳಕವಾಡಿಯಲ್ಲಿನ ಕೆ.ಎಲ್.ಎಸ್ ಇಂಗ್ಲೀಷ್ ಪ್ರೈಮರಿ, ಪ್ರಿ ಪ್ರೈಮರಿ ಮತ್ತು ಹೈಸ್ಕೂಲ್ ಹಾಗೂ ಶಹಾಪೂರದಲ್ಲಿನ ಸರ್ಕಾರಿ ಚಿಂತಾಮನರಾವ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈ ನಾಲ್ವರು ಅಭ್ಯರ್ಥಿಗಳು ಮೂಲ ಅಭ್ಯರ್ಥಿಗಳ ಪರವಾಗಿ ಕಾನೂನು ಬಾಹಿರವಾಗಿ ಪರೀಕ್ಷೆ ಬರೆಯುತ್ತಿದ್ದರು.

ಆರೋಪಿಗಳನ್ನು ಗೋಕಾಕ ತಾಲೂಕು ಹಡಗಿನಾಳದ ಭೀಮಶಿ ಹುಲ್ಲೋಳಿ (24) ಬೆಣಚಿನಮರಡಿಯ ಸುರೇಶ ಕಡಬಿ (25), ಉದಗಟ್ಟಿಯ ಆನಂದ ಒಡೆಯರ (28) ಮತ್ತು ಉದಗಟ್ಟಿಯ ಇನ್ನೊಬ್ಬ ಆರೋಪಿ ಮೆಹಬೂಬ್ ಅಕ್ಕಿವಾಟ (23) ಎಂದು ಗುರುತಿಸಲಾಗಿದೆ. ನಾಲ್ಕೂ ಆರೋಪಿಗಳು ಗೋಕಾಕ ತಾಲೂಕಿನವರಾಗಿದ್ದಾರೆ. ಆರೋಪಿಗಳ ವಿರುದ್ಧ ಉದ್ಯಮಬಾಗ, ಮಾಳಮಾರುತಿ, ಟಿಳಕವಾಡಿ ಮತ್ತು ಶಹಾಪೂರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ಇಲಾಖೆಯ ಹುದ್ದೆಗಳಿಗಾಗಿ ನಡೆದ ಸಿಇಟಿ ಪರೀಕ್ಷೆಯಲ್ಲಿಯೂ ಈ ಆರೋಪಿಗಳು ಮೂಲ ಅಭ್ಯರ್ಥಿಗಳ ಬದಲಾಗಿ ಪರೀಕ್ಷೆ ಬರೆಯಲು ಮುಂದಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಒಟ್ಟು 11,921 ಅಭ್ಯರ್ಥಿಗಳ ಪೈಕಿ 8,461 ಅಭ್ಯರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಿದ್ದರು.

Leave a Reply

Your email address will not be published. Required fields are marked *

You cannot copy content of this page