
ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅಸ್ತಂಗತ
ನವದೆಹಲಿ: ಕೇಂದ್ರದ ಮಾಜಿ ಸಚಿವ ನಿವೃತ್ತ ಮೇಜರ್ ಜಸ್ವಂತ್ ಸಿಂಗ್ ಅವರು ಇಂದು ಬೆಳಗ್ಗೆ 6.55ಕ್ಕೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅಸ್ತಂಗತರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ನಿಮಿತ್ತ ಅವರನ್ನು ಜೂನ್ 25ರಂದು ದೆಹಲಿಯ ಆರ್ಮಿ ಹಾಸ್ಪಿಟಲ್ (ಆರ್&ಆರ್)ಗೆ ದಾಖಲಿಸಲಾಗಿತ್ತು.
ಅಂದಿನಿಂದ ಆರ್ಮಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಸ್ವಂತ್ ಸಿಂಗ್ ಅವರು ನೆತ್ತರು ನಂಜು ಸಮಸ್ಯೆ ಎದುರಿಸಿದ್ದರು ಅಲ್ಲದೆ ಬಹು ಅಂಗಾಂಗ ವೈಫಲ್ಯದ ಕಾಯಿಲೆಯಿಂದ ಬಳಲಿದ್ದರು. ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾಗಿದ್ದು, ಕೊನೆಯುಸಿರೆಳೆದರು. ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.