ವೈರಲ್ ಆದ ರಾಸಲೀಲೆ ವಿಡಿಯೋ - ಸದಾನಂದ ಗೌಡ ಸ್ಪಷ್ಟನೆ

ವೈರಲ್ ಆದ ರಾಸಲೀಲೆ ವಿಡಿಯೋ - ಸದಾನಂದ ಗೌಡ ಸ್ಪಷ್ಟನೆ

 

 

 

ಬೆಳಗಾವಿ: ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಹೋಲುವ ವ್ಯಕ್ತಿಯೋರ್ವ ವಿಡಿಯೋ ಕಾಲಿಂಗ್ ನಲ್ಲಿ ಮಹಿಳೆಯೋರ್ವಳ ಜೊತೆ ಅಶ್ಲೀಲವಾಗಿ ಮಾತನಾಡಿತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಿಜೆಪಿಗೆ ಮತ್ತೊಮ್ಮೆ ಮುಜುಗರ ತಂದಿದೆ. ವಿಡಿಯೋಗೆ ಸಂಬಂಧಪಟ್ಟಂತೆ ಸದಾನಂದ ಗೌಡರು ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, “ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ಅದೊಂದು ತಿರುಚಿದ ಮತ್ತು ನಕಲಿ ವಿಡಿಯೋ’ ಎಂದು ಹೇಳಿದ್ದಾರೆ.

 

 

ಸದಾನಂದ ಗೌಡರಂತೆ ಕಾಣುವ ಮತ್ತು ಅವರದೇ ಧ್ವನಿಯನ್ನು ಹೋಲುವ ವ್ಯಕ್ತಿಯೋರ್ವ ಮಹಿಳೆಯ ಜೊತೆ ವಿಡಿಯೋ ಕಾಲಿಂಗ್ ನಲ್ಲಿ ಅಶ್ಲೀಲವಾಗಿ ಮಾತನಾಡುತ್ತಿರುವಾಗ ವಿಡಿಯೋವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಮಾತನಾಡುವಾಗ ಮಹಿಳೆಗೆ ಬೇರೆ ಬೇರೆ ಅಂಗಾಂಗಗಳನ್ನು ತೋರಿಸುವಂತೆ ಹೇಳುತ್ತ ತನ್ನದೇ ಧಾಟಿಯಲ್ಲಿ ವರ್ಣನೆ ಮಾಡಿದ್ದಾನೆ. ಧ್ವನಿಯಲ್ಲಿನ ಏರಿಳಿತ ಮತ್ತು ಚೆಹರೆಯಲ್ಲಿನ ಬದಲಾವಣೆಗಳು ನೋಡುಗರಲ್ಲಿ ಅಸಹ್ಯ ಮೂಡಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

 

 

ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಸದಾನಂದ ಗೌಡ ಅವರು, “ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ಇದೊಂದು ತಿರುಚಿದ ಮತ್ತು ನಕಲಿ ವಿಡಿಯೋ ಆಗಿದ್ದು, ನನ್ನ ತೇಜೋವಧೆ ಮಾಡಲು ಇಂಥ ವಿಡಿಯೋ ಸೃಷ್ಟಿಸಿದ್ದಾರೆ. ಸೈಬರ್ ಅಪರಾಧ ದಳಕ್ಕೆ ದೂರು ನೀಡಲಾಗಿದ್ದು, ವಿಡಿಯೋ ಸೃಷ್ಟಿಸಿದ ಕಿರಾತಕರನ್ನು ಬಂಧಿಸಲಾಗುತ್ತದೆ ಎನ್ನುವ ನಂಬಿಕೆ ಇದೆ” ಎಂದು ತಿಳಿಸಿದ್ದಾರೆ.

 

 

 ರಾಸಲೀಲೆ ವಿಡಿಯೋ ಕುರಿತಂತೆ ವರದಿ ಮಾಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಫಾರ್ವರ್ಡ್ ಮಾಡುವುದು ಕೂಡ ನ್ಯಾಯಾಲಯದ ಆದೇಶದಂತೆ ಶಿಕ್ಷಾರ್ಹವಾಗುತ್ತದೆ ಎಂದು ಎಚ್ಚರಿಸಿರುವ ಅವರು, ಆ ರೀತಿ ಯಾರಾದರೂ ಮಾಡಿದರೆ ನನಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.  

 

 

ಎರಡು ವರ್ಷಗಳ ಹಿಂದೆ ಬಿಜೆಪಿಯದ್ದೇ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕರ್ತೆ ಮಾಧುರಿ ಮುಧೋಳ ಎನ್ನುವವರು ಸದಾನಂದ ಗೌಡ ವಿರುದ್ಧ ‘ಮೀ ಟೂ’ ಆರೋಪ ಮಾಡಿದ್ದರು. ಸದಾನಂದ ಗೌಡರು ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಅವರಿಗೆ ಫೋಟೋ ಕಳಿಸುವಂತೆ ಮತ್ತು ಬಂದು ಭೇಟಿಯಾಗುವಂತೆ ಪೀಡಿಸುತ್ತಿದ್ದರಂತೆ ಹಾಗೂ ದ್ವಂದ್ವ ಅರ್ಥದಲ್ಲಿ ಮಾತನಾಡುತ್ತ ಕಿರುಕುಳ ನೀಡುತ್ತಿದ್ದರಂತೆ ಅವರು ಸುದ್ದಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅಂದಿನಿಂದ ರಾಸಲೀಲೆ ವಿಡಿಯೋದ ಆರೋಪ ಸದಾನಂದ ಗೌಡರ ನೆತ್ತಿಯ ಮೇಲೆ ತೇಲಾಡುತ್ತಿತ್ತು. ಮಾಧ್ಯಮಗಳು ಇಂತಹ ಸುದ್ದಿಯನ್ನು ಪ್ರಕಟಿಸದಂತೆ ತಡೆಯಲು ಕಳೆದ ಜುಲೈ ತಿಂಗಳಲ್ಲಿಯೇ ಸದಾನಂದ ಗೌಡರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.