ಬೆಳಗಾವಿಯಲ್ಲಿ ಮನೆ ಬಾಡಿಗೆ ಅಥವಾ ಖರೀದಿ ಕೊಡುವವರ ಗಮನಕ್ಕೆ

ಬೆಳಗಾವಿಯಲ್ಲಿ ಮನೆ ಬಾಡಿಗೆ ಅಥವಾ ಖರೀದಿ ಕೊಡುವವರ ಗಮನಕ್ಕೆ

 

ಬೆಳಗಾವಿ: ನಗರದಲ್ಲಿ ಮನೆಯನ್ನು ಬಾಡಿಗೆಗೆ ಅಥವಾ ಖರೀದಿಗೆ ಕೊಡುವ ಮನೆ ಮಾಲೀಕರನ್ನು ಆನಲೈನ್ ಮೂಲಕ ವಂಚಿಸುವ ಜಾಲವೊಂದು ಸಕ್ರಿಯವಾಗಿದ್ದು, ಅಂತಹ ವಂಚಕರಿಂದ ಮನೆ ಮಾಲಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 

 

ಮನೆ ಮಾಲಿಕರು ಸಹಜವಾಗಿಯೇ ಮನೆ ಬಾಡಿಗೆ ಅಥವಾ ಖರೀದಿಗೆ ಕೊಡುವಾಗ ಮಾಹಿತಿಯನ್ನು ಓ.ಎಲ್.ಎಕ್ಸ್ (OLX), ಮ್ಯಾಜಿಕ್ ಬ್ರಿಕ್ಸ್ (Magic Bricks) ಅಥವಾ ನೋ ಬ್ರೋಕರ್ (NoBroker) ನಂತಹ ಮೊಬೈಲ್ ಆಪ್ ಗಳ ಮೂಲಕ ಜಾಹಿರಾತು ನೀಡುತ್ತಾರೆ. ಇದನ್ನೇ ಆಧರಿಸಿಕೊಂಡು ಕೆಲವು ಸೈಬರ್ ವಂಚಕರು ತಾವು ಮಿಲಿಟರಿ ಅಧಿಕಾರಿಗಳೆಂದು ಹೇಳಿಕೊಂಡು ಸಂಪರ್ಕ ಸಾಧಿಸುತ್ತಾರೆ.

 

 

ವಂಚಕರು ‘ತಾವು ಬೆಳಗಾವಿಗೆ ವರ್ಗವಾಗಿ ಬರುತ್ತಿದ್ದೇವೆ. ನಿಮ್ಮ ಮನೆ ಬಗ್ಗೆ ವ್ಯವಹಾರ ಮಾಡೋಣ’ ಅಂತೆಲ್ಲ ಹೇಳಿ ನಿಮ್ಮ ಖಾತೆಗೆ ಟೋಕನ್ ಅಡ್ವಾನ್ಸ್  10 ರೂಪಾಯಿ ವರ್ಗಾವಣೆ ಮಾಡಿಸಿ ನಿಮ್ಮ ವಿಶ್ವಾಸ ಸಂಪಾದಿಸುತ್ತಾರೆ. ಬಳಿಕ ನಿಮಗೆ ಅವರ ಕ್ಯೂಆರ್ ಕೋಡ್ (QR CODE) ಅಥವಾ ಲಿಂಕ್ ಕಳುಹಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಲಪಟಾಯಿಸಿ ಖಾಲಿ ಮಾಡುತ್ತಾರೆ.

 

 

ಹೀಗೆ ಮೋಸ ಮಾಡುವ ಸೈಬರ್ ವಂಚಕರ ಜಾಲವೊಂದು ಬೆಳಗಾವಿಯಲ್ಲಿ ಸಕ್ರಿಯವಾಗಿದ್ದು, ಈ ಕುರಿತಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್ ಪೊಲೀಸರು ಜಾಲದ ಪತ್ತೆಗೆ ಬಲೆ ಬೀಸಿದ್ದಾರೆ. ಹೀಗಾಗಿ ಬಾಡಿಗೆ ಮನೆ ಕೊಡುವವರು ಎಚ್ಚರಿಕೆಯಿಂದ ಇರಬೇಕು. ವ್ಯವಹಾರದ ಹಣವನ್ನು ಖುದ್ದಾಗಿ ಪಾವತಿಸುವಂತೆ ಆಗ್ರಹಿಸಬೇಕು ಎಂದು ಪೊಲೀಸ್ ಪ್ರಕರಣೆಯಲ್ಲಿ ತಿಳಿಸಲಾಗಿದೆ.