ಮತ್ತೆ ಹಾರಾಡಿದ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವಜ

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ದ್ವಜ ಹಾರಾಡಿದ್ದು, ಪ್ರತ್ಯೇಕ ರಾಜ್ಯದ ಪರ ಕಾರ್ಯಕರ್ತರು ‘ಉತ್ತರ ಕರ್ನಾಟಕ ರಾಜ್ಯಕ್ಕೆ ಜೈ’ ಎಂದು ಘೋಷಣೆ ಮೊಳಗಿಸುತ್ತ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವಜ ಹಾರಿಸಿದ್ದಾರೆ.

ಸ್ಥಳೀಯ ಮುಖಂಡ ಮತ್ತು ಮಾಜಿ ಕಾಡಾ ಅಧ್ಯಕ್ಷ ಅಡಿವೇಶ ಇಟಗಿ ನೇತೃತ್ವದಲ್ಲಿ ಧ್ವಜವನ್ನು ಹಾರಿಸಲಾಗಿದೆ. ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ತೋರಲಾಗುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ವತಿಯಿಂದ ಕಾರ್ಯಕರ್ತರು ಧ್ವಜವನ್ನು ಹಾರಿಸಿದ್ದಾರೆ. ಬಳಿಕ ಸ್ಥಳದಲ್ಲಿ ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇಂದು ನಿನ್ನೆಯದಲ್ಲ. ಈ ಭಾಗಕ್ಕೆ ಅನ್ಯಾಯವಾದಾಗಲೆಲ್ಲ ಇಂತಹ ಕೂಗು ಕೇಳಿ ಬರುತ್ತಲೇ ಇರುತ್ತದೆ. ಆದರೆ ಕೆಲವು ದಿನಗಳ ಬಳಿಕ ಮತ್ತೆ ಅದನ್ನು ತಣ್ಣಗಾಗಿಸಲಾಗುತ್ತದೆ. ಕುಂಟುನೆಪ ಹೇಳುತ್ತ ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಸರ್ಕಾರ ಅಧಿವೇಶನ ನಡೆಸದಿರುವ ಕಾರಣಕ್ಕೆ ಈ ಭಾಗದ ಜನರಲ್ಲಿ ಆಕ್ರೋಶ ಮತ್ತು ಅಸಮಾಧಾನ ಮಡುಗಟ್ಟಿದೆ.

ಸುವರ್ಣ ವಿಧಾನ ಸೌಧಕ್ಕೆ ಕಚೇರಿಗಳನ್ನು ಶಿಫ್ಟ್ ಮಾಡಬೇಕೆಂದು ಆಗ್ರಹಿಸಿ ಉತ್ತರ ಕರ್ನಾಟಕದ ಮಠಗಳ ಬಹುತೇಕ ಸ್ವಾಮೀಜಿಗಳು ೨೦೧೮ ರಲ್ಲಿ ಸುವರ್ಣಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ಕಚೇರಿಗಳನ್ನು ಶಿಫ್ಟ್ ಮಾಡುವುದಾಗಿ ವಾಗ್ದಾನ ನೀಡಿದ್ದರು. ಆದರೆ ಅಧಿಕಾರ ಬಂದ ಬಳಿಕ ತಮ್ಮ ವಾಗ್ದಾನವನ್ನು ಯಡಿಯೂರಪ್ಪ ಮರೆತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಸ್ವಾಮೀಜಿಗಳ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿಯೇ, ಅದೇ ವೇದಿಕೆಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವಜವನ್ನು ಹಾರಿಸಲಾಗಿತ್ತು. ಇದೇ ಅಡಿವೇಶ ಇಟಗಿ ಅವರು ಧ್ವಜವನ್ನು ಹಾರಿಸಿದ್ದರು. ಅದು ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಬಳಿಕ ಕೂಡಲೇ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page