ಜೀವನ್ಮುಖಿ ಫೌಂಡೇಶನ್ ಅಡಿಯಲ್ಲಿ ಬೆಳಗಾವಿಯಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಈಡಾದ ವಿದ್ಯಾರ್ಥಿಗಳಿಗೆ ದಾನಿಗಳಿಂದ ಸಹಾಯಧನ, ಬಡವರಿಗೆ ಆಹಾರಧಾನ್ಯದ ಕಿಟ್ ವಿತರಣೆ

ಜೀವನ್ಮುಖಿ ಫೌಂಡೇಶನ್ ಅಡಿಯಲ್ಲಿ ಬೆಳಗಾವಿಯಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಈಡಾದ ವಿದ್ಯಾರ್ಥಿಗಳಿಗೆ ದಾನಿಗಳಿಂದ ಸಹಾಯಧನ, ಬಡವರಿಗೆ ಆಹಾರಧಾನ್ಯದ ಕಿಟ್ ವಿತರಣೆ

 

 

ಬೆಳಗಾವಿ: ಜೀವನ್ಮುಖಿ ಫೌಂಡೇಶನ್ ಅಡಿಯಲ್ಲಿ, ಸಾಗರ ಸೇವಾ ಫೌಂಡೇಶನ್ ಮತ್ತು ನಿಖಿಲ ಫೌಂಡೇಶನ್ ಸಹಯೋಗದಲ್ಲಿ ನಗರದ ಅನಗೋಳದಲ್ಲಿನ ಸಂತ ಮೀರಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಕೊರೊನಾದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಬಡವರಿಗೆ ಆಹಾರಧಾನ್ಯದ ಕಿಟ್ ಗಳನ್ನು ಗುರುವಾರ ದಾನಿಗಳಿಂದ ವಿತರಿಸಲಾಯಿತು.

 

 

ದಾನಿಗಳಾದ ಬಿಮ್ಸ್ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಈರಣ್ಣ ಪಲ್ಲೇದ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಬಿಮ್ಸ್ ಮಾನಸಿಕ ರೋಗ ತಜ್ಞ ಡಾ. ಚಂದ್ರಶೇಖರ ಟಿ. ಆರ್, ಅಭಿಯಂತರ ಎಂ.ಜಿ.ರಾಚನಾಯ್ಕರ್, ಸಾಗರ ಸಂತಾಜಿ ಮೊದಲಾದವರು ಕೊರೊನಾ ಕಾರಣದಿಂದ ಕಷ್ಟಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಬಡ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್ ಗಳನ್ನು ವಿತರಿಸಿದರು.

 

 

ಜೀವನ್ಮುಖಿ ಫೌಂಡೇಶನ್ ಮುಖ್ಯಸ್ಥ ಕಿರಣಕುಮಾರ ಪಾಟೀಲ ಮಾತನಾಡುತ್ತ, ಕೊರೊನಾದಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. “ನಮ್ಮ ಫೌಂಡೇಶನ್ ವತಿಯಿಂದ ದಾನಿಗಳನ್ನು ಸಂಪರ್ಕಿಸಿ ಸಾಧ್ಯವಾದಷ್ಟು ಮಟ್ಟಿಗೆ ಅವರಿಂದಲೇ ಸಂತ್ರಸ್ತರಿಗೆ ನೆರವನ್ನು ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೊಡುವ ದಾನಿಗಳು ಮತ್ತು ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳ ಮಧ್ಯೆ ಜೀವನ್ಮುಖಿ ಫೌಂಡೇಶನ್ ಕೊಂಡಿಯಾಗಿ, ಅರ್ಹರಿಗೆ ನೆರವಾಗುವ ಪ್ರಯತ್ನ ಮಾಡುತ್ತಿದೆ” ಎಂದು ಹೇಳಿದರು.

 

 

ಸಂತ ಮೀರಾ ಶಾಲೆಯ ಐದು ವಿದ್ಯಾರ್ಥಿಗಳಿಗೆ ಧನಸಹಾಯ ನೀಡಿ ಮಾತನಾಡಿದ ಡಾ.ಈರಣ್ಣ ಪಲ್ಲೇದ ಅವರು, ಕೊರೊನಾದಿಂದ ತೊಂದರೆಗೊಳಪಟ್ಟಿರುವ ಕೆಲವು ವಿದ್ಯಾರ್ಥಿಗಳಿಗಾದರೂ ನೆರವು ನೀಡಬೇಕು ಎನ್ನುವ ಬಯಕೆ ಇತ್ತು. ಆದರೆ ಹೇಗೆ ಅನ್ನುವುದು ಗೊತ್ತಾಗಿರಲಿಲ್ಲ. ಈಗ ಜೀವನ್ಮುಖಿ ಫೌಂಡೇಶನ್ ನ ಕಿರಣಕುಮಾರ ಪಾಟೀಲ ಅವರು ಸೂಕ್ತ ವೇದಿಕೆ ಒದಗಿಸಿದ್ದಾರೆ. ಇದೊಂದು ಆತ್ಮತೃಪ್ತಿಯ ಕಾರ್ಯವಾಗಿದ್ದು, ಮುಂದೆಯೂ ಕಷ್ಟದಲ್ಲಿರುವ ಅರ್ಹ ಬಡವಿದ್ಯಾರ್ಥಿಗಳಿಗೆ ನೆರವು ನೀಡುವುದಾಗಿ ಡಾ.ಪಲ್ಲೇದ ಹೇಳಿದರು.

 

 

ಡಾ.ಸಂಜಯ ಡುಮ್ಮಗೋಳ ಮಾತನಾಡಿ, ಕಿರಣಕುಮಾರ ಪಾಟೀಲ ಅವರ ಸೇವೆಯನ್ನು ಶ್ಲಾಘಿಸಿದರು. ಕಿರಣಕುಮಾರ ಅವರ ಸೇವೆಯ ಉದ್ದೇಶ ನಿಸ್ವಾರ್ಥದಿಂದ ಕೂಡಿದ್ದು, ಅವರು ಮಾಡುವ ಕೆಲಸಗಳಿಗೆ ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜೀವನ್ಮುಖಿ ಫೌಂಡೇಶನ್ ಮೂಲಕ ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಹಲವಾರು ವೈದ್ಯರು ಮುಂದೆ ಬರುತ್ತಿರುವುದು ಸಂತಸದ ಸಂಗತಿ. ಈ ರೀತಿಯಿಂದಲೂ ವೈದ್ಯರು ಜನರ ಸೇವೆಯನ್ನು ಮಾಡಲು ಮುಂದೆ ಬರುತ್ತಿರುವುದು ಸಂತಸದ ಸಂಗತಿ ಎಂದರು.

 

 

ಸಂತ ಮೀರಾ ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ದಪ್ತೇದಾರ ಅವರು ವಿದ್ಯಾರ್ಥಿಗಳಿಗೆ ನೆರವು ನೀಡಿದ ಎಲ್ಲ ದಾನಿಗಳಿಗೆ ಕೃತಜ್ಞತೆ ಅರ್ಪಿಸಿದರು. ಶ್ರಮದಾರ ಫೌಂಡೇಶನ್ ನ ನಾರಾಯಣ ವೇತಾಳ, ಶೀತಲ ಫೌಡೇಶನ್ ನ ಶೀತಲ ಮುರಗುಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಅವರು ಕಾರ್ಯಕ್ರಮ ನಿರೂಪಿಸಿದರು.