ಅಂಗಡಿ ಕುಟುಂಬಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ: ಅಮರ ಜಾರಕಿಹೊಳಿ

ಬೆಳಗಾವಿ: ಕೆಎಂಎಫ್ ನಿರ್ದೇಶಕರೂ ಆಗಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಅಮರ ಜಾರಕಿಹೊಳಿ ಅವರು ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಸುದ್ದಿಗೆ ಇಂದು ಸ್ಪಷ್ಟನೆ ನೀಡಿರುವ ಅಮರ ಜಾರಕಿಹೊಳಿ, ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗುವ ಇರಾದೆ ತಮಗೆ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಸುರೇಶ ಅಂಗಡಿ ಕುಟುಂಬಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಅಂತಲೂ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

“ ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ.ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ‌ ಮಾಡುವ ಮನಸ್ಸಿದೆ. ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ ಕ್ಷೇತ್ರದ ಸಾರ್ವಜನಿಕರ ಕುಂದು‌ ಕೊರತೆಗಳನ್ನು ಆಲಿಸಿ ; ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ” ಎಂದು ಅಮರ ಹೇಳಿದ್ದಾರೆ.

“ಕೇಂದ್ರ ಸಚಿವರಾಗಿದ್ದ ಸನ್ಮಾನ್ಯ ದಿವಂಗತ ಸುರೇಶ ಅಂಗಡಿಯವರು ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಈ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡುವ ಜವಾಬ್ದಾರಿ ನನ್ನಂತಹ ಪ್ರತಿಯೊಬ್ಬ ಕಾರ್ಯಕರ್ತನ‌ ಮೇಲಿದೆ.  ಸಾಮಾಜಿಕ‌ ಜಾಲತಾಣಗಳಲ್ಲಿ ನನ್ನ ಬಗ್ಗೆ ಟ್ರೋಲ್ ಆಗುತ್ತಿರುವ ವಿಷಯಗಳನ್ನು ಗಮನಿಸಿದ್ದೇನೆ. 

ನನ್ನ ಸ್ನೇಹಿತರೂ, ಆಪ್ತರು ಮತ್ತು ಕಾರ್ಯಕರ್ತರ ಮನದಾಳವನ್ನು ಅರಿತಿದ್ದೇನೆ. ರಾಜಕೀಯವಾಗಿ ಬೆಳೆಯಲು ನನಗೆ ಬೇಕಾದಷ್ಟು ಸಮಯವಿದೆ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಗುವ ಮನಸ್ಸು ನನಗಿಲ್ಲ. ನಾನು ಎಲ್ಲಾ‌ ಕಾರ್ಯಕರ್ತರಂತೆ ಟೊಂಕ ಕಟ್ಟಿ‌ ನಿಂತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ”, ಎಂದು ಅಮರ ಜಾರಕಿಹೊಳಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page